ಬೀಳಗಿ: ಅನೈತಿಕ ಸಂಬಂಧದ ಶಂಕೆ; ಪತ್ನಿಯನ್ನು ಕೊಲೆ ಮಾಡಿ ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿದ್ದ ಕ್ರೂರಿ ಪತಿ ಬಂಧನ!

ಬೀಳಗಿ : ಪತ್ನಿಯ ಮೇಲೆ ಅನೈತಿಕ ಸಂಬಂಧದ ಅನುಮಾನ ವ್ಯಕ್ತಪಡಿಸಿ ಕಟ್ಟಿಗೆಯಿಂದ ಹಲ್ಲೆ ನಡೆಸಿ, ಬಳಿಕ ನೇಣು ಬಿಗಿದು ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ-ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಘೋರ ಘಟನೆ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ಜುಲೈ 27ರಂದು ಸಂಜೆ ನಡೆದಿದೆ.

ಮಹಾಲಿಂಗಪುರ ಮೂಲದ ಭಾಗ್ಯಶ್ರೀ ಜಿಗಳೂರು (23) ಹತ್ಯೆಗೊಳಗಾದ ದುರ್ದೈವಿ. ಆಕೆಯ ಪತಿ ಪ್ರವೀಣ್ ಜಿಗಳೂರು ಕೊಲೆ ಮಾಡಿದ ಆರೋಪಿ. ದಂಪತಿ ನಡುವೆ ಜಗಳವಾಗಿ ಭಾಗ್ಯಶ್ರೀ ಎರಡು ತಿಂಗಳ ಹಿಂದೆ ತವರು ಮನೆಗೆ ತೆರಳಿದ್ದರು. ಸಂಸಾರ ಚೆನ್ನಾಗಿ ನಡೆಸೋಣ ಎಂದು ನಂಬಿಸಿ ಜುಲೈ 27ರಂದು ಆರೋಪಿ ಪ್ರವೀಣ್ ಪತ್ನಿಯನ್ನು ಗಲಗಲಿಯ ಮನೆಗೆ ಕರೆತಂದಿದ್ದ. ಮನೆಗೆ ಬಂದ ದಿನವೇ ಸಂಜೆ ಅನೈತಿಕ ಸಂಬಂಧದ ಅನುಮಾನದ ಮೇಲೆ ಪತ್ನಿಯ ಮೇಲೆ ಕಟ್ಟಿಗೆಯಿಂದ ತೀವ್ರವಾಗಿ ಹಲ್ಲೆ ನಡೆಸಿ, ನೇಣು ಬಿಗಿದಿದ್ದಾನೆ. ಆಕೆ ಪ್ರಾಣಸಂಕಟದಿಂದ ಒದ್ದಾಡುತ್ತಿದ್ದಾಗ ಅತ್ತೆ ಹಾಗೂ ಮಾವನಿಗೆ ವಿಡಿಯೋ ಕಾಲ್ ಮಾಡಿ ದೃಶ್ಯವನ್ನು ತೋರಿಸಿದ್ದಾನೆ. ಅಲ್ಲದೆ ತನ್ನ ಮೊಬೈಲ್‌ನಲ್ಲಿಯೂ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ಈ ವಿಡಿಯೋದಲ್ಲಿ ನೇಣು ಕುಣಿಕೆಯ ಹಿಂಭಾಗದಲ್ಲಿ ಅವರ ಮದುವೆ ಸಮಯದ ಹೆಸರುಗಳು ಸ್ಪಷ್ಟವಾಗಿ ಸೆರೆಯಾಗಿವೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ದಾರ್ಥ್ ಗೋಯೆಲ್ ಹಾಗೂ ಬೀಳಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಪ್ರವೀಣ್‌ನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.