ಚಿತ್ತೂರು: ಕಾರಿನ ಮೇಲೆ ಉರುಳಿಬಿದ್ದ ಟೊಮೆಟೊ ಲೋಡ್ ಲಾರಿ; ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾದ ಕುಟುಂಬ!

ಚಿತ್ತೂರು (ಆಂಧ್ರಪ್ರದೇಶ): ಬೆಂಗಳೂರಿನ ಹೊರವಲಯದಲ್ಲಿ ಸಂಭವಿಸಿದ್ದ ಭೀಕರ ವೋಲ್ವೋ ಕಾರು ಅಪಘಾತವನ್ನು ನೆನಪಿಸುವಂತಹ ಮತ್ತೊಂದು ದುರಂತ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಸಂಭವಿಸಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಿತ್ತೂರು ಜಿಲ್ಲೆಯ ಗೂಟಿ ಮಂಡಲದ ಕುಕ್ಕಲಪಳ್ಳಿ ರಾಷ್ಟ್ರೀಯ ಹೆದ್ದಾರಿಯ ಕೊತ್ತ ಪೇಟ ಗ್ರಾಮದ ಬಳಿ ಗುರುವಾರ ಈ ಘಟನೆ ನಡೆದಿದೆ. ಟೊಮೆಟೊ ಲೋಡ್ ಮಾಡಿಕೊಂಡು ಸಾಗುತ್ತಿದ್ದ ಬೃಹತ್ ಸರಕು ಸಾಗಣೆ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ‘ಸ್ವಿಫ್ಟ್ ಡಿಸೈರ್’ ಕಾರಿನ ಮೇಲೆಯೇ ಉರುಳಿ ಬಿದ್ದಿದೆ.

ದೇವಸ್ಥಾನದ ದರ್ಶನಕ್ಕೆಂದು ಕುಟುಂಬ ಸಮೇತ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಕಾರು ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ. ಈ ವೇಳೆ ಕಾರಿನ ತೀರಾ ಹತ್ತಿರದಲ್ಲಿ ಹಿಂಬದಿಯಿಂದ ಬರುತ್ತಿದ್ದ ಈಚರ್ ಲಾರಿ ಚಾಲಕ ವಾಹನವನ್ನು ನಿಯಂತ್ರಿಸಲು ಯತ್ನಿಸಿದ್ದಾನೆ. ಆದರೆ, ಲಾರಿ ನಿಯಂತ್ರಣ ಸಿಗದೆ ರಸ್ತೆಯಲ್ಲೇ ಕಾರಿನ ಮೇಲೆ ಮಗುಚಿ ಬಿದ್ದಿದೆ.
ಬೃಹತ್ ಲಾರಿ ಬಿದ್ದ ತೀವ್ರತೆಗೆ ಸ್ವಿಫ್ಟ್ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಆದರೆ, ಕಾರಿನಲ್ಲಿದ್ದ ಕುಟುಂಬದ ಎಲ್ಲ ಸದಸ್ಯರು ಯಾವುದೇ ಗಂಭೀರ ಗಾಯಗಳಿಲ್ಲದೆ ಪವಾಡಸದೃಶವಾಗಿ ಹೊರಬಂದಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಘಾತಕ್ಕೊಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ತಕ್ಷಣವೇ ಸ್ಪಂದಿಸಿದ ಸ್ಥಳೀಯರು ಹಾಗೂ ಇತರ ವಾಹನ ಸವಾರರು ಕಾರಿನಲ್ಲಿದ್ದವರನ್ನು ರಕ್ಷಿಸಿ ಹೊರತೆಗೆದಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಮಿಸಿದ ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಅಪಘಾತದಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಬಳಿಕ ಹಾನಿಗೊಳಗಾದ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಪ್ರಕರಣ ದಾಖಲಿಸಿಕೊಂಡಿರುವ ಸ್ಥಳೀಯ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅತಿವೇಗ, ಸುರಕ್ಷಿತ ಅಂತರ ಕಾಯ್ದುಕೊಳ್ಳದಿರುವುದು ಅಥವಾ ಚಾಲಕರ ನಿರ್ಲಕ್ಷ್ಯ ಈ ಅಪಘಾತಕ್ಕೆ ಕಾರಣವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಚಲಾಯಿಸುವಾಗ ಮುಂದಿನ ವಾಹನಗಳ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು ಎಷ್ಟು ಅಗತ್ಯ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸ್ಥಳೀಯರ ಸಮಯೋಚಿತ ನೆರವಿನಿಂದಾಗಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.