ಬಂಟ್ವಾಳ: ಶಾಲಾ ಬಸ್ ಮೇಲೆ ಬೃಹತ್ ಮರ ಉರುಳಿ ಬಿದ್ದು ಎಲ್‌ಕೆಜಿ ವಿದ್ಯಾರ್ಥಿನಿ ದಾರುಣ ಸಾ*ವು; ಇಬ್ಬರು ಗಂಭೀರ!

ಬಂಟ್ವಾಳ: ಶಾಲಾ ಮಕ್ಕಳನ್ನು ಮನೆಗೆ ತಲುಪಿಸಿ ವಾಪಸ್ ಬರುತ್ತಿದ್ದ ಶಾಲಾ ಬಸ್ ಒಂದರ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಬಸ್ ನಲ್ಲಿದ್ದ ಆರು ವರ್ಷ ಪ್ರಾಯದ ಬಾಲಕಿ ಸಾವನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ನಡೆದಿದೆ.

ಕಲ್ಲಡ್ಕ ಶ್ರೀರಾಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿರುವ ಚಿರನ್ವಿ (6) ಮೃತ ಬಾಲಕಿ. ಈಕೆ ಬಂಟ್ವಾಳ ತಾಲೂಕಿನ ಬಿಳಿಯೂರಿನ ತೋಟ ಹೌಸ್ ನ ಚಂದ್ರಶೇಖರ ಮತ್ತು ಅನಿತಾ ದಂಪತಿಯ ಪುತ್ರಿ. ಗಂಭೀರವಾಗಿ ಗಾಯಗೊಂಡಿರುವ ಪೆರಾಜೆ ಸಾದಿಕುಕ್ಕು ನಿವಾಸಿ ಗಣೇಶ್ ಗೌಡ ಅವರ ಪುತ್ರಿ ಅನ್ವಿ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೋರ್ವ ಗಾಯಾಳು ಪೆರ್ನೆ ನಿವಾಸಿ ಕ್ಷಿತಿ ರೈ ಅವರನ್ನು ಕಲ್ಲಡ್ಕದ ಪುಷ್ಪರಾಜ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸಂಜೆ ಮಕ್ಕಳನ್ನು ಬಿಡಲು ಎಂದಿನಂತೆಯೇ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಆಂಗ್ಲ ಮಾಧ್ಯಮ ವಿಭಾಗದಿಂದ ಹೊರಟ ಬಸ್, ಹೆದ್ದಾರಿ ಮೂಲಕ ಸಾಗಿ ಮಾಣಿ, ಭರಣಿಕೆರೆ, ಕಲ್ಲೆಟ್ಟಿಗೆ ಹೋಗಿ ಬಳಿಕ ಪೆರ್ನೆಗೆ ಹೋಗುವುದಿತ್ತು. ಕೆಲ ಮಕ್ಕಳನ್ನು ಇಳಿಸಿದ ಬಳಿಕ ಬಂಟ್ವಾಳ ತಾಲೂಕು ಬರಿಮಾರು ಗ್ರಾಮದ ಕಲ್ಲೇಟಿ ಎಂಬಲ್ಲಿನ ಶ್ರೀ ಕಾನಲ್ತಾಯ ದೈವಸ್ಥಾನ ದ ಬದಿಯ ಮರ ಸಂಚರಿಸುತ್ತಿದ್ದ ಬಸ್ ಮೇಲೆ ಎರಗಿದೆ. ಘಟನೆಯ ತೀವ್ರತೆಗೆ 24 ಸೀಟರ್ ನ ಮಿನಿ ಬಸ್ ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಬಸ್ಸಿನಲ್ಲಿದ್ದ ಪುಟಾಣಿ ಮಕ್ಕಳು ಆಘಾತದಿಂದ ತತ್ತರಿಸಿ ಹೋಗಿದ್ದಾರೆ. ಈ ವೇಳೆ ಸುಮಾರು 6 ವರ್ಷ ಪ್ರಾಯದ ಚಿರನ್ವಿ ಎಂಬ ಹೆಣ್ಣು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ದುರಂತದ ಮಾಹಿತಿ ಲಭಿಸುತ್ತಿದ್ದಂತೆ ಪುತ್ತೂರು ತಾಲೂಕು ಆಸ್ಪತ್ರೆಗೆ ಬಂಟ್ವಾಳ ತಹಶೀಲ್ದಾರ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅರುಣ್ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲಾಧಿಕಾರಿ ದರ್ಶನ್, ತೀವ್ರ ಆಘಾತದಲ್ಲಿರುವ ಪೋಷಕರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ತಕ್ಷಣವೇ ಪರಿಹಾರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲದೆ ಘಟನೆ ಸಂಬಂಧ ಶಾಲಾ ಸಿಬ್ಬಂದಿಯಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.