Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪ್ರತಿಭಟನಾಕಾರರ ಬಂಧನ: ಉತ್ತರಾಖಂಡ ಹೈಕೋರ್ಟ್‌ನಿಂದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ!

Spread the love

ಡೆಹ್ರಾಡೂನ್‌: ಸಿಜೆಪಿ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆದ ಉತ್ತರಾಖಂಡ ಪೊಲೀಸರ ಕ್ರಮದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಉತ್ತರಾಖಂಡ ಹೈಕೋರ್ಟ್, ಪೊಲೀಸರು ಇರುವುದು ಜನರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸುವುದಕ್ಕಾಗಿಯೋ ಅಥವಾ ಸರ್ಕಾರದ ವರ್ಚಸ್ಸನ್ನು ಕಾಪಾಡುವುದಕ್ಕೆಯೇ?” ಎಂದು ಪ್ರಶ್ನಿಸಿದೆ.
ಉತ್ತರಾಖಂಡ ಪರಿವರ್ತನ ಪಕ್ಷ(ಯುಪಿಪಿ)ದ ಅಧ್ಯಕ್ಷರಾಗಿರುವ 62 ವರ್ಷದ ಪ್ರಭಾತ್ ಧ್ಯಾನಿ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ವ್ಯವಸ್ಥೆಯ ವೈಫಲ್ಯಗಳ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿಗಳ ಬೆಂಬಲಾರ್ಥವಾಗಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಬಳಿಕ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಅವರನ್ನು ಋಷಿಕೇಶ ರೈಲು ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ಯುಪಿಪಿ ಕಾರ್ಯದರ್ಶಿ ಲಾಲ್ ಮಣಿ ಅವರು ಧ್ಯಾನ್‌ ಅವರನ್ನು ಹೈಕೋರ್ಟ್ ಮುಂದೆ ಹಾಜರುಪಡಿಸುವಂತೆ ಕೋರಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಉತ್ತರಿಸಿದ್ದ ರಾಜ್ಯ ಸರ್ಕಾರದ ಪರ ವಕೀಲರು, ಧ್ಯಾನ್ ಅವರನ್ನು ವಶಕ್ಕೆ ಪಡೆದ 24 ಗಂಟೆಗಳ ಒಳಗಾಗಿ ಬಿಡುಗಡೆ ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

sessi
ನ್ಯಾಯಮೂರ್ತಿ ರವೀಂದ್ರ ಮೈಥಾನಿ ಮತ್ತು ನ್ಯಾಯಮೂರ್ತಿ ಸಿದ್ದಾರ್ಥ್ ಸಾಹ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಎರಡನೇ ದಿನವೂ ಪ್ರಕರಣದ ವಿಚಾರಣೆ ನಡೆಸಿ, ಪೊಲೀಸರ ನಡವಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು.
“ಇದು ಅರಾಜಕತೆಗೆ ಸಮಾನ. ನಾವು ಸಂವಿಧಾನದ ಆಡಳಿತದಡಿಯಲ್ಲಿ ಜೀವಿಸುತ್ತಿದ್ದೇವೆ. ರಾಷ್ಟ್ರೀಯ ಭದ್ರತೆ ಅಥವಾ ಸರ್ಕಾರದ ವರ್ಚಸ್ಸಿನ ಹೆಸರಿನಲ್ಲಿ ಜನರಿಗೆ ಕಿರುಕುಳ ನೀಡಬೇಡಿ” ಎಂದು ಕೋರ್ಟ್ ಹೇಳಿದೆ.
ಅವರನ್ನು ತಡೆಯಲು ಇರುವ ಕಾನೂನಾತ್ಮಕ ಆಧಾರವನ್ನು ಪ್ರಶ್ನಿಸಿದ ಪೀಠವು, “ದೇಶದ ಯಾವುದೇ ಭಾಗಕ್ಕೆ ಸಂಚರಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಅವರನ್ನು ತಡೆಯಲು ನೀವ್ಯಾರು?” ಎಂದು ಪ್ರಶ್ನಿಸಿದೆ.

ಧ್ಯಾನಿ ಪ್ರತಿಭಟನೆಯಲ್ಲಿ ಭಾಗವಹಿಸಲು ಹೋಗುತ್ತಿದ್ದರು ಎಂದು ಸರ್ಕಾರಿ ವಕೀಲರು ಉತ್ತರಿಸಿದಾಗ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಅಪರಾಧವೇ? ಇದು ಪೊಲೀಸರ ಸಂಪೂರ್ಣ ಗೂಂಡಾಗಿರಿ. ಪೊಲೀಸರು ಯಾವ ಕಾನೂನು ನಿರ್ದೇಶನಗಳನ್ನು ನೀಡಿದ್ದರು? ಎಂದು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತು.
ಅಶಾಂತಿ ಅಥವಾ ಸಾರ್ವಜನಿಕ ತೊಂದರೆಯನ್ನು ತಡೆಯಲು ಆದೇಶ ಹೊರಡಿಸಲು ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ಟೆ ಅಧಿಕಾರ ನೀಡುವ ಬಿಎನ್‌ಎಸ್‌ಎಸ್ ಸೆಕ್ಷನ್ 163 ಅನ್ನು ಸರ್ಕಾರಿ ವಕೀಲರು ಉಲ್ಲೇಖಿಸಿದರು.
ಈ ಬಗ್ಗೆ, “ದಿಲ್ಲಿ ಪೊಲೀಸರು ಸೆಕ್ಷನ್ 163 ರ ಅಡಿಯಲ್ಲಿ ಆದೇಶ ಹೊರಡಿಸಿದಾಗ ಉತ್ತರಾಖಂಡದಲ್ಲಿ ಧ್ಯಾನಿ ಅವರನ್ನು ಏಕೆ ತಡೆಯಲಾಯಿತು “ಎಂದು ನ್ಯಾಯಮೂರ್ತಿ ಮೈಥಾನಿ ಪ್ರಶ್ನಿಸಿದರು. ಅಲ್ಲದೆ, ಆ ಆದೇಶದ ಉಲ್ಲಂಘನೆಯಾಗಿದ್ದರೆ ಅದನ್ನು ದಿಲ್ಲಿ ಪೊಲೀಸರು ನೋಡಿಕೊಳ್ಳಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಬಳಿಕ ರಾಜ್ಯ ಸರ್ಕಾರವು, ಪೊಲೀಸ್ ಅಧಿಕಾರಿಯ ಕಾನೂನುಬದ್ಧ ನಿರ್ದೇಶನಗಳನ್ನು ಪಾಲಿಸದ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಅವಕಾಶ ನೀಡುವ ಬಿಎನ್‌ಎಸ್‌ಎಸ್ ಸೆಕ್ಷನ್ 172 ಅನ್ನು ಉಲ್ಲೇಖಿಸಿದಾಗ, ಧ್ಯಾನ್ ಅವರಿಗೆ ಯಾವ ಕಾನೂನುಬದ್ಧ ನಿರ್ದೇಶನ ನೀಡಲಾಗಿತ್ತು ಮತ್ತು ಅವರನ್ನು ರೈಲಿನಿಂದ ಕೆಳಗಿಳಿಸುವುದನ್ನು ಸಮರ್ಥಿಸಲು ಯಾವ ಆಧಾರವಿತ್ತು ಎಂದು ಪೀಠ ಪ್ರಶ್ನಿಸಿದೆ.
ಪ್ರತಿಭಟನೆಯಲ್ಲಿ ಧ್ಯಾನಿ ಭಾಗವಹಿಸುವುದರಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಬಹುದು ಎಂದು ನಮೂದಿಸಲಾಗಿದ್ದ ಪೋಲಿಸ್ ಡೈರಿಯನ್ನು ಪರಿಶೀಲಿಸಿದ ಹೈಕೋರ್ಟ್ ಇನ್ನಷ್ಟು ಅಸಮಾಧಾನ ವ್ಯಕ್ತಪಡಿಸಿತು.

“ನೀವು ಇರುವುದು ಸರ್ಕಾರದ ವರ್ಚಸ್ಸನ್ನು ರಕ್ಷಿಸುವುದಕ್ಕೋ ಅಥವಾ ಜನರ ಸಾಂವಿಧಾನಿಕ ಹಕ್ಕುಗಳನ್ನು ಕಾಯುವುದಕ್ಕೋ?” ಎಂದು ಪ್ರಶ್ನಿಸಿದ ಕೋರ್ಟ್, ಭದ್ರತೆ ಅಥವಾ ವರ್ಚಸ್ಸಿನ ನಿರ್ವಹಣೆಯ ಹೆಸರಿನಲ್ಲಿ ಅಧಿಕಾರಿಗಳು ನಾಗರಿಕರಿಗೆ ಕಿರುಕುಳ ನೀಡಬಾರದು ಎಂದು ಹೇಳಿದೆ.
ಧ್ಯಾನಿ ಅವರನ್ನು ರೈಲಿನಿಂದ ಕೆಳಗಿಳಿಸಿ ರೈಲು ನಿಲ್ದಾಣದಲ್ಲಿ ಬಂಧಿಸಿದ ಅಧಿಕಾರಿಯನ್ನು ಈ ಪ್ರಕರಣದಲ್ಲಿ ಪ್ರತಿವಾದಿಯನ್ನಾಗಿ ಮಾಡಲು ಕೋರ್ಟ್ ನಿರ್ದೇಶಿಸಿದೆ. ರಾಜ್ಯ ಡಿಜಿಪಿ, ಡೆಹ್ರಾಡೂನ್ ಮತ್ತು ನೈನಿತಾಲ್ ಎಸ್‌ಎಸ್ಪಿಗಳು, ಸಂಬಂಧಪಟ್ಟ ಎಸ್‌ಎಚ್‌ಒ ಮತ್ತು ಸರ್ಕಾರಿ ರೈಲ್ವೆ ಪೊಲೀಸರಿಗೆ ನೋಟಿಸ್ ಜಾರಿ ಮಾಡಿ ಉತ್ತರಿಸುವಂತೆ ಸೂಚಿಸಿದ ನ್ಯಾಯಾಲಯ, ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ನಿಗದಿಪಡಿಸಿದೆ.


Spread the love
Share:

administrator

Leave a Reply

Your email address will not be published. Required fields are marked *