ತುಮಕೂರು: ಜೋಗಿಹಳ್ಳಿ ಆಂಜನೇಯ ದೇವಸ್ಥಾನದ ಬಳಿ ಭೀಕರ ದುರಂತ; 5 ವರ್ಷದ ಬಾಲಕನ ಕುತ್ತಿಗೆ ಕಚ್ಚಿ ಗಾಯಗೊಳಿಸಿದ ಬೀದಿನಾಯಿಗಳು!

ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೋಗಿಹಳ್ಳಿಯಲ್ಲಿ ದೇವಸ್ಥಾನದ ಬಳಿ ತೆರಳುತ್ತಿದ್ದ ಬಾಲಕನ ಮೇಲೆ ಆರೇಳು ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿರುವ ಘಟನೆ ನಡೆದಿದೆ.

ಐದು ವರ್ಷದ ಬಾಲಕ ಊರಿನ ಆಂಜನೇಯ ದೇವಸ್ಥಾನದ ಬಳಿ ತೆರಳುತಿದ್ದ ವೇಳೆ ಏಕಾಏಕಿ ಬೀದಿ ನಾಯಿಗಳು ದಾಳಿ ನಡೆಸಿ ಕುತ್ತಿಗೆಗೆ ಬಾಯಿ ಹಾಕಿವೆ. ಕೂಡಲೇ ಸ್ಥಳದಲ್ಲಿ ವಾಕಿಂಗ್ ಮಾಡತ್ತಿದ್ದವರು ಬಾಲಕನ ರಕ್ಷಣೆ ಮಾಡಿದ್ದಾರೆ.
ಬೀದಿನಾಯಿಗಳ ದಾಳಿಯಿಂದಾಗಿ ಬಾಲಕನ ಕುತ್ತಿಗೆ, ಕೈ ಹಾಗೂ ಬೆನ್ನಿನ ಭಾಗಕ್ಕೆ ಗಾಯಗಳಾಗಿವೆ. ಸದ್ಯ ಗಾಯಾಳು ಬಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.