ಉಳ್ಳಾಲ: ವಿದ್ಯುತ್ ದೋಷ ಸರಿಪಡಿಸಲು ಹೋಗಿ ಟ್ರಾನ್ಸ್‌ಫಾರ್ಮರ್ ಮೇಲಿದ್ದ ಮೆಸ್ಕಾಂ ಲೈನ್‌ಮ್ಯಾನ್ ವಿದ್ಯುತ್ ಸ್ಪರ್ಶದಿಂದ ಸಾ*ವು!

ಉಳ್ಳಾಲ: ವಿದ್ಯುತ್ ದೋಷ ಸರಿಪಡಿಸಲು ಟ್ರಾನ್ಸ್‌ಫಾರ್ಮರ್ ಏರಿದ್ದ ಮೆಸ್ಕಾಂ ಲೈನ್‌ಮ್ಯಾನ್‌ರೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ನಯಾಪಟ್ಣದಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ.

ಮೃತರನ್ನು ಅಂಬಿಕಾರೋಡ್ ಪಿಲಾರು ನಿವಾಸಿ, ಮೆಸ್ಕಾಂ ನೌಕರ ಶೇಖ್ ಝಮೀರ್ (49) ಎಂದು ಗುರುತಿಸಲಾಗಿದೆ. ಮೃತರು ಪತ್ನಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಉಚ್ಚಿಲ ನಯಾಪಟ್ಣ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ, ಶೇಖ್ ಝಮೀರ್ ಹಾಗೂ ಅವರ ಸಹೋದ್ಯೋಗಿ ಸಂಗಪ್ಪ ಅವರು ಸೋಮವಾರ ಬೆಳಿಗ್ಗೆ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಜಿಒಎಸ್ (GOS – Gang Operated Switch) ಆಫ್ ಆಗಿದೆ ಎಂದು ಭಾವಿಸಿ ಝಮೀರ್ ಟ್ರಾನ್ಸ್‌ಫಾರ್ಮರ್ ಏರಿದ್ದಾರೆ. ಆದರೆ, ವಿದ್ಯುತ್ ಪ್ರವಾಹ ಸಸ್ಪೆಂಡ್ ಆಗದೇ ಇದ್ದಿದ್ದರಿಂದ ಭಾರಿ ಪ್ರಮಾಣದ ವಿದ್ಯುತ್ ಆಘಾತಕ್ಕೊಳಗಾಗಿ ಮೇಲಿಂದ ಕೆಳಗೆ ಎಸೆಯಲ್ಪಟ್ಟಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.