ಉಳ್ಳಾಲ: ಬಾಡಿಗೆ ಮನೆ ಕೇಳುವ ನೆಪದಲ್ಲಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದರೋಡೆ!

ಉಳ್ಳಾಲ : ಬಾಡಿಗೆ ಮನೆ ಕೇಳುವ ನೆಪದಲ್ಲಿ ಬಂದು ವೃದ್ಧೆಯನ್ನು ನೂಕಿ, ಅವರ ಬಾಯಿ ಒತ್ತಿ ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿ ಬಂಗಾರದ ಸರ ಹಾಗೂ ಬಳೆಯನ್ನು ದರೋಡೆ ಮಾಡಿಕೊಂಡು ಪರಾರಿಯಾಗಿರುವ ಘಟನೆ ಉಳ್ಳಾಲ ತಾಲೂಕಿನ ಕುರ್ನಾಡು ಗ್ರಾಮದ ಕಾಯರಗೋಳಿಯಲ್ಲಿ ಸಂಭವಿಸಿದೆ.

ಕಾಯರಗೋಳಿ ನಿವಾಸಿ ಭವಾನಿ ಎಂಬವರು ಆಗಸ್ಟ್ 3ರಂದು ಮಧ್ಯಾಹ್ನ 1.15ರ ಸುಮಾರಿಗೆ ಮನೆಯಲ್ಲಿದ್ದಾಗ ಈ ದುರಂತ ನಡೆದಿದೆ. ಮಗ ಕೆಲಸಕ್ಕೆ ತೆರಳಿದ್ದ ವೇಳೆ ಬಾಗಿಲು ತಟ್ಟಿದ ಇಬ್ಬರು ಅಪರಿಚಿತ ಯುವಕರು, “ನಮಗೆ ಬಾಡಿಗೆ ಮನೆ ಬೇಕು, ನಾವು ಇನ್ಫೋಸಿಸ್‌ನ ನೌಕರರು. ಬ್ರಾಹ್ಮಣರಿಗೆ ಮನೆ ಇದೆಯೇ?” ಎಂದು ವಿಚಾರಿಸಿದ್ದಾರೆ. ವೃದ್ಧೆ ಭವಾನಿ ಅವರು “ಮಗ ಬಂದ ಮೇಲೆ ಕೇಳಿ ಹೇಳುತ್ತೇನೆ” ಎಂದಾಗ, ಮಗನ ಫೋನ್ ನಂಬರ್ ಕೇಳಿದ್ದಾರೆ. ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ವೃದ್ಧೆ ಬಾಗಿಲು ಹಾಕಲು ಯತ್ನಿಸಿದಾಗ, ಆರೋಪಿಗಳು ಬಾಗಿಲನ್ನು ಬಲವಾಗಿ ದೂಡಿ ಒಳನುಗ್ಗಿದ್ದಾರೆ.
ನೂಕಿದ ರಭಸಕ್ಕೆ ಹಾಲ್‌ನಲ್ಲಿ ಕೆಳಗೆ ಬಿದ್ದ ವೃದ್ಧೆ ಬೊಬ್ಬೆ ಹೊಡೆದಾಗ, ಒಬ್ಬ ಆರೋಪಿ ಆಕೆಯ ಬಾಯಿಯನ್ನು ಗಟ್ಟಿಯಾಗಿ ಒತ್ತಿ ಹಿಡಿದಿದ್ದಾನೆ. ಮತ್ತೊಬ್ಬ ಆರೋಪಿ ಕುತ್ತಿಗೆಯಲ್ಲಿದ್ದ 16 ಗ್ರಾಂ ತೂಕದ ಚಿನ್ನದ ಸರ ಹಾಗೂ ಬಲಕೈಯಲ್ಲಿದ್ದ 8 ಗ್ರಾಂ ತೂಕದ ಬಂಗಾರದ ಬಳೆಯನ್ನು ಬಲವಂತವಾಗಿ ಎಳೆದೊಯ್ದಿದ್ದಾನೆ. ಎಡಕೈಯಲ್ಲಿದ್ದ ಬಳೆಯನ್ನೂ ಎಳೆಯಲು ಯತ್ನಿಸಿದ್ದು, ಅದು ಸಾಧ್ಯವಾಗದಿದ್ದಾಗ ವೃದ್ಧೆಗೆ ಗಾಯಗೊಳಿಸಿ, ಮನೆಯ ಹೊರಗಿನಿಂದ ಚಿಲಕ ಹಾಕಿ ಪರಾರಿಯಾಗಿದ್ದಾರೆ.
ದರೋಡೆಕೋರರ ಹಲ್ಲೆಯಿಂದ ವೃದ್ಧೆಯ ಕೈ ಮತ್ತು ಮಣಿಗಂಟಿಗೆ ತೀವ್ರ ತರಚಿದ ಗಾಯಗಳಾಗಿವೆ. ಲೂಟಿಯಾದ ಬಂಗಾರದ ಒಟ್ಟು ಮೌಲ್ಯ ಸುಮಾರು ₹3 ಲಕ್ಷ ಎಂದು ಅಂದಾಜಿಸಲಾಗಿದೆ. ಅರ್ಧ ಗಂಟೆಯ ನಂತರ ಮಗಳು ಪ್ರತಿಭಾ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.