ಉಡುಪಿ: ಕೊಡವೂರು ಬಳಿ ನದಿಗೆ ಬಿದ್ದ ಕಾರು – ಧೈರ್ಯ ಮೆರೆದು ಚಾಲಕ ಹಾಗೂ 3 ವರ್ಷದ ಮಗುವನ್ನು ರಕ್ಷಿಸಿದ ಸ್ಥಳೀಯ ಮೀನುಗಾರ!

ಉಡುಪಿ: ಕೊಡವೂರು ಸಮೀಪದ ಚೆನ್ನಂಗಡಿಯಲ್ಲಿ ನಿಯಂತ್ರಣ ತಪ್ಪಿದ ಕಾರೊಂದು ನದಿಗೆ ಬಿದ್ದ ಭೀಕರ ಘಟನೆ ನಡೆದಿದ್ದು, ಕಾರಿನಲ್ಲಿದ್ದ ಚಾಲಕ ಹಾಗೂ ಮೂರು ವರ್ಷದ ಮಗುವನ್ನು ಸ್ಥಳೀಯ ಮೀನುಗಾರರೊಬ್ಬರು ನದಿಗೆ ಧುಮುಕಿ ರಕ್ಷಿಸಿದ್ದಾರೆ. ಚೆನ್ನಂಗಡಿ ಮೂಲದ ಮೀನುಗಾರ ಗಣೇಶ್ ಅವರ ಸಾಹಸಮಯ ಜಾಣ್ಮೆಯಿಂದಾಗಿ ಇಬ್ಬರ ಪ್ರಾಣ ಉಳಿದಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಚೆನ್ನಂಗಡಿ ಸೇತುವೆ ಸಮೀಪ ಕಾರು ಆಕಸ್ಮಿಕವಾಗಿ ನದಿಗೆ ಬಿದ್ದು ಮುಳುಗುತ್ತಿರುವುದನ್ನು ಗಮನಿಸಿದ ಗಣೇಶ್, ಕ್ಷಣ ಮಾತ್ರವೂ ವಿಳಂಬ ಮಾಡದೆ ತಕ್ಷಣವೇ ನದಿಗೆ ಧುಮುಕಿದ್ದಾರೆ. ನೀರು ತುಂಬುತ್ತಿದ್ದ ಕಾರಿನೊಳಗೆ ಸಿಲುಕಿ ಪರದಾಡುತ್ತಿದ್ದ ಚಾಲಕ ಹಾಗೂ ತೀವ್ರ ಆತಂಕದಲ್ಲಿದ್ದ 3 ವರ್ಷದ ಎಳೆಯ ಮಗುವನ್ನು ಕಾರಿನಿಂದ ಹೊರತೆಗೆದು ಸುರಕ್ಷಿತವಾಗಿ ದಂಡೆಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಗಣೇಶ್ ಅವರ ಸಮಯಪ್ರಜ್ಞೆ ಹಾಗೂ ಪ್ರಾಣದ ಹಂಗು ತೊರೆದು ನಡೆಸಿದ ಈ ಧೈರ್ಯದ ಸಾಹಸಕ್ಕೆ ಶ್ಲಾಘನೆ ವ್ಯಕ್ತವಾಗಿದೆ.