ಮನಿ ಲಾಂಡರಿಂಗ್, ಡ್ರಗ್ಸ್ ಪ್ರಕರಣದ ನೆಪದಲ್ಲಿ ಬೆದರಿಕೆ: ಉಡುಪಿಯಲ್ಲಿ ₹15.98 ಲಕ್ಷ ಸೈಬರ್ ವಂಚನೆ!

ಉಡುಪಿ : ದೆಹಲಿ ಸಿಬಿಐ ಹಾಗೂ ಪೊಲೀಸ್ ಅಧಿಕಾರಿಗಳ ಸೋಗಿನಲ್ಲಿ ಕರೆ ಮಾಡಿ, ಮನಿ ಲಾಂಡರಿಂಗ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸುವುದಾಗಿ ಬೆದರಿಸಿ ಉಡುಪಿಯ ವ್ಯಕ್ತಿಯೊಬ್ಬರಿಂದ ಬರೋಬ್ಬರಿ ₹15,98,976 ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ. ಈ ಕುರಿತು ಉಡುಪಿಯ ಶೇಷಾಚಲ (51) ಎಂಬುವವರು ನೀಡಿದ ದೂರಿನ ಮೇರೆಗೆ ಉಡುಪಿ ಸೆನ್ (CEN) ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳೆದ ಅಕ್ಟೋಬರ್ 18ರಂದು ಬೆಳಿಗ್ಗೆ 11.25ರ ಸುಮಾರಿಗೆ ಶೇಷಾಚಲ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಹಿಂದಿಯಲ್ಲಿ ಕರೆ ಮಾಡಿದ್ದಾನೆ. ‘‘ದೆಹಲಿಯಲ್ಲಿ ನಿಮ್ಮ ಹೆಸರಿನ ಐಸಿಐಸಿಐ (ICICI) ಬ್ಯಾಂಕ್ ಪಾಸ್‌ಬುಕ್ ಪತ್ತೆಯಾಗಿದ್ದು, ಅದು ಪಂಕಜ್ ಶರ್ಮಾ ಎಂಬಾತನ ಮನಿ ಲಾಂಡರಿಂಗ್, ಡ್ರಗ್ಸ್ ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ಬಳಕೆಯಾಗಿದೆ. ನಾವು ದೆಹಲಿ ಸಿಬಿಐ ಪೊಲೀಸರಾಗಿದ್ದು, ನಿಮ್ಮನ್ನು ತಕ್ಷಣವೇ ಬಂಧಿಸಲು ನ್ಯಾಯಾಲಯದಿಂದ ಆದೇಶವಾಗಿದೆ. ಕೂಡಲೇ ದೆಹಲಿಗೆ ಬನ್ನಿ, ಇಲ್ಲದಿದ್ದರೆ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಿ’’ ಎಂದು ಬೆದರಿಸಿದ್ದಾನೆ.

ಆರೋಪಿಗಳು ಹಿಂದಿಯಲ್ಲಿ ಮಾತನಾಡುತ್ತಿದ್ದ ಕಾರಣ ಶೇಷಾಚಲ ಅವರು ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದಾರೆ. ತಕ್ಷಣವೇ ಪತ್ನಿಯ ಮೊಬೈಲ್‌ಗೆ ವಿಡಿಯೋ ಕರೆ ಮಾಡಿದ ವಂಚಕ, ಪೊಲೀಸ್ ಸಮವಸ್ತ್ರದಲ್ಲಿ ಕಾಣಿಸಿಕೊಂಡು ತಾನು ದೆಹಲಿ ಪೊಲೀಸ್ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ, ಮತ್ತೊಂದು ಮೊಬೈಲ್ ಪರದೆಯಲ್ಲಿ ಶೇಷಾಚಲ ಅವರ ಹೆಸರಿನಲ್ಲಿದ್ದ ನಕಲಿ ಕೇಸ್ ನಂಬರ್ ತೋರಿಸಿ ನಂಬಿಸಿದ್ದಾನೆ.
ಬಳಿಕ ಮತ್ತೊಬ್ಬ ವ್ಯಕ್ತಿಗೆ ಫೋನ್ ಹಸ್ತಾಂತರಿಸಿದ್ದು, ‘‘ನೀವು ಏನೇ ಮಾಡುತ್ತಿದ್ದರೂ ಪ್ರತಿ ಗಂಟೆಗೊಮ್ಮೆ ನಮಗೆ ಮೆಸೇಜ್ ಕಳುಹಿಸಬೇಕು. ಈ ವಿಷಯವನ್ನು ಯಾರಿಗೂ ತಿಳಿಸಬಾರದು, ತಿಳಿಸಿದರೆ ನಿಮಗೆ ಅಪಾಯವಿದೆ’’ ಎಂದು ಎಚ್ಚರಿಸಿ ದಂಪತಿಯನ್ನು ಮಾನಸಿಕವಾಗಿ ‘ಡಿಜಿಟಲ್ ಅರೆಸ್ಟ್’ ರೀತಿಯಲ್ಲಿ ಗೃಹಬಂಧನದಲ್ಲಿಟ್ಟಿದ್ದರು. ಪ್ರತಿದಿನ ಪತ್ನಿಯ ನಂಬರ್‌ಗೆ ವಿಡಿಯೋ ಕರೆ ಮಾಡುತ್ತಿದ್ದ ನಕಲಿ ಪೊಲೀಸರು, ‘‘ನ್ಯಾಯಾಧೀಶರು, ಸಿಬಿಐ ಹಾಗೂ ಆರ್‌ಬಿಐ (RBI) ಅಧಿಕಾರಿಗಳು ಬಂದು ತನಿಖೆ ನಡೆಸಲಿದ್ದಾರೆ’’ ಎಂದು ಹೇಳಿ ದಂಪತಿಯ ಬಳಿಯಿದ್ದ ನಗದು, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ಸಂಪೂರ್ಣ ವಿವರ ಪಡೆದುಕೊಂಡಿದ್ದಾರೆ. ಆರ್‌ಬಿಐ ತನಿಖೆಯ ನೆಪವೊಡ್ಡಿ, ‘‘ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ನಾವು ನೀಡುವ ಬ್ಯಾಂಕ್ ಖಾತೆಗೆ ಜಮಾ ಮಾಡಿ, ಪರಿಶೀಲನೆ ಬಳಿಕ ವಾಪಸ್ ನೀಡಲಾಗುವುದು’’ ಎಂದು ನಂಬಿಸಿದ್ದಾರೆ.
ಇದನ್ನು ನಿಜವೆಂದು ನಂಬಿದ ಶೇಷಾಚಲ ಅವರು, ಅಕ್ಟೋಬರ್ 31ರಂದು ಆರ್‌ಟಿಜಿಎಸ್ (RTGS) ಮೂಲಕ ವಂಚಕರು ಸೂಚಿಸಿದ ಯೆಸ್ ಬ್ಯಾಂಕ್ ಖಾತೆಗೆ ₹11,00,000 ಹಾಗೂ ನವೆಂಬರ್ 5ರಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ ₹4,98,976 ಸೇರಿ ಒಟ್ಟು ₹15,98,976.40 ಹಣವನ್ನು ವರ್ಗಾಯಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ತಾವು ಸೈಬರ್ ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದ್ದು, ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಐಟಿ ಕಾಯ್ದೆ ಕಲಂ 66(d) ಹಾಗೂ ಬಿಎನ್‌ಎಸ್ (BNS) ಕಲಂ 318(4), 319(2), 308(2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.