ತಿರುವನಂತಪುರಂ: ಹ್ಯಾಪಿಲ್ಯಾಂಡ್ ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಘೋರ ದುರಂತ; ಸ್ಕೈರೈಡ್ ಕುಸಿದು ಬಿದ್ದು ಏಳು ಜನರಿಗೆ ಗಾಯ!

ತಿರುವನಂತಪುರಂ: ಕೇರಳದ ವೆಂಬಾಯಂನಲ್ಲಿರುವ ಪ್ರಸಿದ್ಧ ‘ಹ್ಯಾಪಿಲ್ಯಾಂಡ್ ವಾಟರ್ ಥೀಮ್ ಮತ್ತು ಅಮ್ಯೂಸ್ಮೆಂಟ್ ಪಾರ್ಕ್’ನಲ್ಲಿ ಗುರುವಾರ ಮಧ್ಯಾಹ್ನ ಭೀಕರ ಅಪಘಾತವೊಂದು ಸಂಭವಿಸಿದೆ. ಉದ್ಯಾನವನದ ದೈತ್ಯ ಸ್ಕೈರೈಡ್ (Skyride) ಯಂತ್ರದ ಕೇಂದ್ರ ಭಾಗ ಮುರಿದು ಕುಸಿದು ಬಿದ್ದ ಪರಿಣಾಮ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಾವೆಲಿಕ್ಕರದ ಅಗ್ನಿಶಾಮಕ ಅಧಿಕಾರಿ ರತೀಶ್ ಅವರ ಕುಟುಂಬದ ಹುಟ್ಟುಹಬ್ಬದ ಆಚರಣೆಯ ವೇಳೆ ಈ ಘಟನೆ ನಡೆದಿದ್ದು, ಇಡೀ ಪ್ರವಾಸ ದುಃಸ್ವಪ್ನವಾಗಿ ಮಾರ್ಪಟ್ಟಿದೆ.

ರತೀಶ್ ಅವರು ತಮ್ಮ ಮಗಳು ತನ್ಮಯಾಳ 5ನೇ ತರಗತಿಯ ಹುಟ್ಟುಹಬ್ಬದ ಸಂಭ್ರಮಕ್ಕಾಗಿ ಕುಟುಂಬದ 11 ಜನರೊಂದಿಗೆ ಉದ್ಯಾನವನಕ್ಕೆ ಬಂದಿದ್ದರು. ಮಧ್ಯಾಹ್ನ 1.20 ರ ಸುಮಾರಿಗೆ ಅವರ ಹೆಣ್ಣುಮಕ್ಕಳಾದ ತಪ್ಸ್ಯಾ (8 ನೇ ತರಗತಿ) ಮತ್ತು ತನ್ಮಯಾ ರೈಡ್ನಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. ರೈಡ್ ಆರಂಭವಾದ ಕೆಲವೇ ಕ್ಷಣಗಳಲ್ಲಿ ಆಪರೇಟರ್ ಭಯಭೀತರಾಗಿ ಲಿವರ್ ಬಳಸಿ ವೇಗ ನಿಯಂತ್ರಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ಅತಿವೇಗವಾಗಿ ತಿರುಗಲಾರಂಭಿಸಿದ ಸ್ವಿಂಗ್ ಕುರ್ಚಿಗಳು ಒಂದಕ್ಕೊಂದು ಮತ್ತು ಹತ್ತಿರದ ಕಾಂಕ್ರೀಟ್ ಗೋಡೆಗಳಿಗೆ ಡಿಕ್ಕಿ ಹೊಡೆದಿವೆ. ಕೊನೆಗೆ ಕೇಂದ್ರ ರಚನೆಯೇ ಮುರಿದು ಇಡೀ ಯಂತ್ರ ಒಂದು ಬದಿಗೆ ವಾಲಿ ಕುಸಿದು ಬಿದ್ದಿದೆ.
ಯಂತ್ರ ಮುರಿದು ಬೀಳುತ್ತಿದ್ದಂತೆ ಸವಾರಿಯ ಸರಪಳಿಯೊಂದು ಬಾಲಕಿ ತಪ್ಸ್ಯಾಳ ಕುತ್ತಿಗೆಗೆ ಸುತ್ತಿಕೊಂಡು ಗಾಯಗಳಾಗಿವೆ. ಮತ್ತೊಬ್ಬ ಪುತ್ರಿ ತನ್ಮಯಾಳ ಕೈಬೆರಳಿಗೆ ಗಾಯಗಳಾಗಿದೆ. ರೈಡ್ ನಿಲ್ಲುವ ಮೊದಲೇ ಮಕ್ಕಳು ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆ ಕುಸಿದ ಭಾಗದ ಅಡಿಯಲ್ಲಿ ಸಿಲುಕಿ ಕಾಲಿಗೆ ಗಂಭೀರ ಗಾಯ ಮಾಡಿಕೊಂಡಿದ್ದಾರೆ. ಈ ರೈಡ್ ಕಲ್ಲಿನ ಮೇಲ್ಮೈ ಹಾಗೂ ಕೃತಕ ಅಲೆಗಳ ಕೊಳದ (Wave Pool) ಅತ್ಯಂತ ಹತ್ತಿರದಲ್ಲೇ ಕುಸಿದಿದ್ದು, ಸ್ವಲ್ಪ ಆ ಕಡೆ ಈ ಕಡೆ ಆಗಿದ್ದರೂ ಭೀಕರ ಪ್ರಾಣಹಾನಿ ಸಂಭವಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸದ್ಯ ಗಾಯಾಳು ಮಕ್ಕಳಿಗೆ ಸ್ತಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಮ್ಯೂಸ್ಮೆಂಟ್ ಪಾರ್ಕ್ನಲ್ಲಿ ಕನಿಷ್ಠ ಪ್ರಥಮ ಚಿಕಿತ್ಸಾ ಕಿಟ್ ಅಥವಾ ಆಂಬ್ಯುಲೆನ್ಸ್ ಸೌಲಭ್ಯವೂ ಇರಲಿಲ್ಲ ಎಂದು ರತೀಶ್ ಆರೋಪಿಸಿದ್ದಾರೆ. ಗಾಯಾಳುಗಳನ್ನು ಪಾರ್ಕ್ನಲ್ಲಿದ್ದ ಹಳೆಯ ಓಮ್ನಿ ವ್ಯಾನ್ನಲ್ಲಿ ಸಾಗಿಸಲು ಅಧಿಕಾರಿಗಳು ಯತ್ನಿಸಿದಾಗ ಆಕ್ರೋಶಗೊಂಡ ಸಾರ್ವಜನಿಕರು ವಾಹನವನ್ನು ಜಖಂಗೊಳಿಸಿ, ಸೂಕ್ತ ವೈದ್ಯಕೀಯ ಸಹಾಯಕ್ಕಾಗಿ ಒತ್ತಾಯಿಸಿದರು. ಆಂಬ್ಯುಲೆನ್ಸ್ ಬಂದ ಬಳಿಕವೇ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲು ಸಾಧ್ಯವಾಯಿತು. ಉದ್ಯಾನವನದಲ್ಲಿರುವ ಸವಾರಿಗಳು ಹಳೆಯದಾಗಿದ್ದು, ತುಕ್ಕು ಹಿಡಿದಿವೆ ಮತ್ತು ಸೂಕ್ತ ನಿರ್ವಹಣೆ ಇಲ್ಲದೆ ವಿಚಿತ್ರ ಶಬ್ದಗಳನ್ನು ಮಾಡುತ್ತಿದ್ದರೂ ರಜಾ ದಿನಗಳ ರಶ್ ಬಳಸಿಕೊಳ್ಳಲು ಜನರ ಜೀವದ ಜೊತೆ ಆಟವಾಡಲಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.