ಬಗ್ಗುಂಡಿ ಕೆರೆ ಮಾಲಿನ್ಯ ಮುಕ್ತಗೊಳಿಸಲು ‘ದ ಸ್ಯಾಫ್ರನ್ ಫ್ರಂಟ್’ ಹೆಜ್ಜೆ: ಪ್ರಾದೇಶಿಕ ಅಧಿಕಾರಿಗಳ ಗಮನಕ್ಕೆ ಸಮಸ್ಯೆ

ಮಂಗಳೂರು: ಬಗ್ಗುಂಡಿ ಕೆರೆಗೆ ವಿವಿಧ ಮೂಲಗಳಿಂದ ತ್ಯಾಜ್ಯ ಹರಿಯುತ್ತಿರುವ ಆರೋಪದ ಹಿನ್ನೆಲೆಯಲ್ಲಿ, ತಕ್ಷಣ ಸ್ಥಳ ಪರಿಶೀಲನೆ ನಡೆಸಿ ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ದ ಸ್ಯಾಫ್ರನ್ ಫ್ರಂಟ್ ರಾಷ್ಟ್ರೀಯ ಅಧ್ಯಕ್ಷ ರಾಜೇಶ್ ಪವಿತ್ರನ್ ಅವರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಂಗಳೂರು ಪ್ರಾದೇಶಿಕ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಬೈಕಂಪಾಡಿಯ ಬಿಪಿಸಿಎಲ್ ಇಂಧನ ಟರ್ಮಿನಲ್, ಕೆರೆಯ ಅಕ್ಕಪಕ್ಕದಲ್ಲಿರುವ ವಸತಿ ಸಮುಚ್ಚಯಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ವೆಟ್‌ವೆಲ್‌ನಿಂದ ನೇರವಾಗಿ ಕೆರೆಗೆ ತ್ಯಾಜ್ಯ ಹರಿಯುತ್ತಿದೆ ಎಂದು ಆರೋಪಿಸಲಾಗಿದೆ. ಇದರಿಂದ ಕೆರೆಯ ನೀರು, ಸುತ್ತಮುತ್ತಲಿನ ಕೃಷಿ ಭೂಮಿ ಹಾಗೂ ಅಂತರ್ಜಲ ಕಲುಷಿತಗೊಂಡಿದ್ದು, ಕೃಷಿಕರ ಜೀವನೋಪಾಯಕ್ಕೆ ಸಂಕಷ್ಟ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಮೂರು ಕಡೆಗಳಿಂದ ಹರಿಯುತ್ತಿರುವ ತ್ಯಾಜ್ಯದ ಮೂಲವನ್ನು ಪತ್ತೆಹಚ್ಚಬೇಕು. ಕೆರೆಯ ನೀರು, ಕೆಸರು ಹಾಗೂ ಅಂತರ್ಜಲದ ಮಾದರಿಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕು. ಅನಧಿಕೃತ ತ್ಯಾಜ್ಯ ವಿಸರ್ಜನೆ ದೃಢಪಟ್ಟಲ್ಲಿ ಅದನ್ನು ತಕ್ಷಣ ಸ್ಥಗಿತಗೊಳಿಸಿ, ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
ಕೆರೆಯಲ್ಲಿನ ವಿಷಕಾರಿ ಕೆಸರನ್ನು ತೆರವುಗೊಳಿಸಿ ಪರಿಸರ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಬೇಕು. ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ತ್ವರಿತ ಕ್ರಮ ಕೈಗೊಳ್ಳದಿದ್ದರೆ ಸ್ಥಳೀಯರೊಂದಿಗೆ ಬೃಹತ್ ಹೋರಾಟ ನಡೆಸಲು ದ ಸ್ಯಾಫ್ರನ್ ಫ್ರಂಟ್ ನಿರ್ಧರಿಸಿದೆ