ತಮಿಳುನಾಡು: ಪತ್ನಿಯ ಮುಖಕ್ಕೆ ಚಾಕು ಇರಿದು, ಪೊಲೀಸರಿಗೆ ವಿಡಿಯೋ ಕಳಿಸಿ ಎಸ್ಕೇಪ್ ಆಗಿದ್ದ ಪತಿ ಕೊನೆಗೂ ಅರೆಸ್ಟ್!

ಪಟ್ಟುಕೊಟ್ಟೈ (ತಮಿಳುನಾಡು): ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತು ಆಕೆಯ ಮುಖ, ಕೆನ್ನೆ ಹಾಗೂ ತುಟಿಗಳಿಗೆ ಚಾಕುವಿನಿಂದ ಇರಿದು, ಬಳಿಕ ತಮಿಳುನಾಡು ಪೊಲೀಸರ ಹೆಸರಿಗೆ ವಿಡಿಯೋ ಮಾಡಿ ಆತ್ಮಹತ್ಯೆಯ ಬೆದರಿಕೆ ಹಾಕಿದ್ದ ಕಾರು ಚಾಲಕ ರಾಜ ಅಲಿಯಾಸ್ ಧರ್ಮರಾಜ (40) ಎಂಬಾತನನ್ನು ವಿಶೇಷ ಪಡೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ತಂಜಾವೂರು ಜಿಲ್ಲೆಯ ಪಟ್ಟುಕೊಟ್ಟೈ ಬಳಿಯ ಮಾಯಿಲ್‌ಪಾಳಯಂನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಅಕ್ಷಯ (35) ಸದ್ಯ ತಂಜಾವೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಿ.ಎ. ಪದವೀಧರೆಯಾಗಿದ್ದ ಅಕ್ಷಯ ತಿರುಚ್ಚಿ ಮತ್ತು ಕೊಯಮತ್ತೂರಿನ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದರು. ತಮಿಳು ನಟ ವಿಜಯ್ ಅವರ ಕಟ್ಟಾ ಅಭಿಮಾನಿಯಾಗಿದ್ದ ಈಕೆ, ವಿಧಾನಸಭಾ ಚುನಾವಣೆ ವೇಳೆ ವಿಜಯ್ ಪರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪೋಸ್ಟ್‌ಗಳನ್ನು ಹಾಕುತ್ತಿದ್ದರು. ಈ ನಡುವೆ ತಿರುಚ್ಚಿಯಲ್ಲಿ ಕೆಲಸ ಮಾಡುವಾಗ ಈಕೆಗೆ ಜೋಸ್ ಎಂಬ ಯುವಕನ ಪರಿಚಯವಾಗಿದೆ. ಆ ಯುವಕ ಅಕ್ಷಯಳನ್ನು ಭೇಟಿಯಾಗಲು ಆಗಾಗ್ಗೆ ಮಾಯಿಲ್‌ಪಾಳಯಂನ ಬಾಡಿಗೆ ಮನೆಗೆ ಬರುತ್ತಿದ್ದನು. ಇದನ್ನು ಪತಿ ರಾಜ ಆಕ್ಷೇಪಿಸಿದಾಗ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು.
ಬುಧವಾರ ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರ ಜಗಳದ ವಿಡಿಯೋಗಳು ಭಾರಿ ವೈರಲ್ ಆಗಿದ್ದವು. ಮೊದಲ ವಿಡಿಯೋದಲ್ಲಿ, ಅಕ್ಷಯ ತನ್ನ ಪ್ರೇಮಿ ಜೋಸ್ ಜೊತೆ ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಪತಿ ರಾಜ ಆಕೆಯ ಕೈ ಹಿಡಿದು ಹೊರಗೆ ಎಳೆದುಕೊಂಡು ಬರುವುದು ಮತ್ತು ಪ್ರೇಮಿಯ ಮೇಲೆ ಹಲ್ಲೆ ಮಾಡುವುದು ಕಂಡುಬಂದಿದೆ. ಇದರ ಬೆನ್ನಲ್ಲೇ ರಾಜ ಅಳುತ್ತಾ ಮಾಡಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಅದರಲ್ಲಿ, “ತಮಿಳುನಾಡು ಪೊಲೀಸರಿಗೆ ನಮಸ್ಕಾರ. ತಿರುಚ್ಚಿಯ ಜೋಸ್ ಎಂಬವನಿಂದ ಇವತ್ತು ನನ್ನ ಕುಟುಂಬ ನಾಶವಾಗಿದೆ. ನಾನು ನನ್ನ ಹೆಂಡತಿಯನ್ನು ಚಾಕುವಿನಿಂದ ಇರಿದು ಬಂದಿದ್ದೇನೆ, ನನ್ನ ಮಗನೊಂದಿಗೆ ನಾನು ಸಾಯಲಿದ್ದೇನೆ,” ಎಂದು ರಾಜ ಹೇಳಿಕೊಂಡಿದ್ದನು.
ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪಟ್ಟುಕೊಟ್ಟೈ ಪೊಲೀಸರು ತನಿಖೆ ನಡೆಸಿದಾಗ, ರಾಜ ತನ್ನ ಹೆಂಡತಿಯ ಮುಖಕ್ಕೆ ಚಾಕುವಿನಿಂದ ಇರಿದು, ಆಕೆಯನ್ನು ಮನೆಯೊಳಗೆ ಲಾಕ್ ಮಾಡಿ 4 ವರ್ಷದ ಮಗನೊಂದಿಗೆ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ರಾಜ ತನ್ನ ಮಗನೊಂದಿಗೆ ವಲ್ಲಂ ಎಂಬ ಪ್ರದೇಶದಲ್ಲಿ ಅಡಗಿಕೊಂಡಿರುವುದನ್ನು ಪತ್ತೆಹಚ್ಚಿ, ಆತನನ್ನು ಬಂಧಿಸಿದ್ದಾರೆ. ಸದ್ಯ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.