ಗೂಗಲ್‌ನಿಂದ ಬಯಲಾದ ಕಾಮುಕನ ಕೃತ್ಯ: ಅಶ್ಲೀಲ ವಿಡಿಯೊಗಳ ಚಿತ್ರೀಕರಣ, ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ; ಕಾನ್ಪುರದ ಯುವಕನ ಬಂಧನ

ಕಾನ್ಸುರ: ಮಹಿಳಾ ಕುಟುಂಬ ಸದಸ್ಯರ ಅಶ್ಲೀಲ ವಿಡಿಯೊಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಗೂಗಲ್ ಡ್ರೈವ್ ಗೆ ಅಪ್‌ಲೋಡ್
ಮಾಡಿದ್ದ ಹಾಗೂ ಎಂಟು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ ಕಾಲ್ಪುರದ 25 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗೂಗಲ್ ಶಂಕಾಸ್ಪದ ವಿಷಯವನ್ನು ಗುರುತಿಸಿ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ (NCRP) ಮೂಲಕ ಅಧಿಕಾರಿಗಳಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಗಂಭೀರ ಅಪರಾಧಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸ್ವೀಕರಿಸುವ NCRP ಟಿಪ್‌ಲೈನ್ ಮೂಲಕ ಈ ಪ್ರಕರಣದ ಮಾಹಿತಿ ಲಭಿಸಿದೆ ಎಂದು ಪೊಲೀಸ್ ಉಪ ಆಯುಕ್ತರು (DCP) ಎಕ್ಸ್ ನಲ್ಲಿ ಪ್ರಕಟಿಸಿರುವ ವಿಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.

“ಗೂಗಲ್ ಮೂಲಕ NCRP ಪೋರ್ಟಲ್ ಗೆ ಮಾಹಿತಿ ಬಂದಿದೆ. Gmail ಖಾತೆ, IMEI ಸಂಖ್ಯೆ ಸೇರಿದಂತೆ ಹಲವು ತಾಂತ್ರಿಕ ವಿವರಗಳನ್ನು ಗೂಗಲ್ ಒದಗಿಸಿತ್ತು. IP ವಿಳಾಸಗಳ ನೆರವಿನಿಂದ ಆರೋಪಿಯನ್ನು ಪತ್ತೆಹಚ್ಚಿ ಆತನ ಮೊಬೈಲ್ ಫೋನ್ ಪರಿಶೀಲಿಸಲಾಯಿತು” ಎಂದು ಅವರು ಹೇಳಿದ್ದಾರೆ.
ತನಿಖೆಯ ವೇಳೆ, ಆರೋಪಿಯು ತನ್ನ ಕುಟುಂಬದ ಮಹಿಳೆಯರು ಶೌಚಾಲಯ ಬಳಸುವ ವೇಳೆ ರಹಸ್ಯವಾಗಿ ವೀಡಿಯೋ ಚಿತ್ರೀಕರಿಸಿ ಅವುಗಳನ್ನು ಗೂಗಲ್ ಡ್ರೈವ್‌ಗೆ ಅಪ್‌ಲೋಡ್ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಂಟು ವರ್ಷದ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ವೀಡಿಯೋ ಕೂಡ ಆತನ ಮೊಬೈಲ್ ನಲ್ಲಿ ಪತ್ತೆಯಾಗಿದೆ ಎಂದು ಹೇಳಿದ್ದಾರೆ.