ಶಿವಮೊಗ್ಗ: ಉಕ್ಕಿ ಹರಿದ ಮಾಲತಿ ಹೊಳೆಯಲ್ಲಿ ಸಿಲುಕಿದ್ದ ಕಾರು; ಸ್ಥಳೀಯರಿಂದ ಕುಟುಂಬದ ರಕ್ಷಣೆ!

ಶಿವಮೊಗ್ಗ, ಆಗಸ್ಟ್ 01: ಹೊಳೆಯಲ್ಲಿ ಕಾರು ಸಿಲುಕಿ ಹೊನ್ನಾವರ ಮೂಲದ ಕುಟುಂಬವೊಂದು ಪರದಾಡಿದ ಪರದಾಡಿದ ಘಟನೆ ನಡೆದಿದೆ. ತೀರ್ಥಹಳ್ಳಿ ತಾಲೂಕಿನ ಆಗುಂಬೆ ಸಮೀಪದ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದ್ದು, ಕಾರಿಗೆ ಏಕಾಏಕಿ ನೀರು ನುಗ್ಗಿದ್ದರಿಂದ ಕಾರಿನ ಮೇಲೇರಿ ಕುಟುಂಬಸ್ಥರು ಸಹಾಯಕ್ಕಾಗಿ ಕೂಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಕಾರಿಗೆ ಹಗ್ಗ ಕಟ್ಟಿ ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ.

ಭಾರೀ ಮಳೆಗೆ ತೀರ್ಥಹಳ್ಳಿಯಲ್ಲಿ ಮಾಲತಿ ಹೊಳೆ ಉಕ್ಕಿ ಹರಿಯುತ್ತಿದೆ. ಇದರಿಂದ ನಾಬಳ ಸೇತುವೆ ಬಂದ್ ಆಗಿದೆ. ಅದೇ ಮಾರ್ಗದಲ್ಲಿ ಹೊನ್ನಾವರ ಮೂಲದ ಕುಟುಂಬವೊಂದು ಶೃಂಗೇರಿಗೆ ಕಾರಿನಲ್ಲಿ ತೆರಳುತ್ತಿತ್ತು. ಈ ವೇಳೆ ಏಕಾಏಕಿ ಕಾರಿಗೆ ನೀರು ತುಂಬಿ, ಸೇತುವೆ ಮೇಲೆ ನಿಂತಿದೆ.
ಇದನ್ನು ಗಮನಿಸಿದ ಸ್ಥಳೀಯರಾದ ಪ್ರವೀಣ್, ಮಂಜುನಾಥ್ ಹಾಗೂ ಇನ್ನಿತರರು ಕೂಡಲೇ ಕಾರಿಗೆ ಹಗ್ಗಕಟ್ಟಿ ಎಳೆದು ಸುರಕ್ಷಿತ ಸ್ಥಳಕ್ಕೆ ತಂದಿದ್ದಾರೆ. ಕಾರಿನಲ್ಲಿದ್ದ ಬಾಲಕನೋರ್ವನನ್ನು ಸ್ಥಳೀಯರು ಹೊತ್ತು ತಂದಿದ್ದಾರೆ. ಸ್ಥಳೀಯರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.