ಬಗ್ಗುಂಡಿ ಕೆರೆ ಉಳಿಸಿ-ಕೃಷಿ ಭೂಮಿ ರಕ್ಷಿಸಿ: ಸ್ಯಾಫ್ರನ್ ಫ್ರಂಟ್ ಜನಜಾಗೃತಿ ಸಭೆಗೆ ಅಭೂತಪೂರ್ವ ಬೆಂಬಲ

ಮಂಗಳೂರು: ಬಗ್ಗುಂಡಿ ಕೆರೆ ಉಳಿಸಿ ಮತ್ತು ಕೃಷಿ ಭೂಮಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಸ್ಯಾಫ್ರನ್ ಫ್ರಂಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಜನಜಾಗೃತಿ ಅಭಿಯಾನವು ನಿನ್ನೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಸಮಾವೇಶದಲ್ಲಿ ಭಾಗವಹಿಸಿದ್ದ ನೂರಾರು ಸಾರ್ವಜನಿಕರು ಕೆರೆಯ ಪುನಶ್ಚೇತನಕ್ಕೆ ಮತ್ತು ಭೂಮಿ ಕಳೆದುಕೊಂಡ ಸಂತ್ರಸ್ತರ ಪರವಾಗಿ ಧ್ವನಿ ಎತ್ತಿದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಯಾಫ್ರನ್ ಫ್ರಂಟ್ ಮುಖ್ಯಸ್ಥರಾದ ರಾಜೇಶ್ ಪವಿತ್ರನ್ ಅವರು, ದಶಕಗಳಿಂದಲೂ ಅಭಿವೃದ್ಧಿಯ ಹೆಸರಿನಲ್ಲಿ ಭೂಮಿಯನ್ನು ವಶಪಡಿಸಿಕೊಂಡು ಅದನ್ನು ಬಳಸದೆ ಹಾಗೆಯೇ ಬಿಟ್ಟಿರುವುದು ಮೂಲ ಮಾಲೀಕರಿಗೆ ಹಾಗೂ ರೈತರಿಗೆ ಮಾಡುತ್ತಿರುವ ದೊಡ್ಡ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಶಪಡಿಸಿಕೊಂಡ ಭೂಮಿಯನ್ನು ತಕ್ಷಣವೇ ಮೂಲ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ನ್ಯಾಯ ಒದಗಿಸಬೇಕು ಮತ್ತು ಕೃಷಿಕರ ಜೀವನಾಡಿಯಾಗಿರುವ ಬಗ್ಗಂಡಿ ಕೆರೆಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ, ಹೂಳು ಎತ್ತಿ ಪುನಶ್ಚೇತನಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಮಹತ್ವದ ಹೋರಾಟಕ್ಕೆ ಸಾಕ್ಷಿಯಾದ ಹಿರಿಯ ಹೋರಾಟಗಾರರಾದ ರೋಹಿತಾಕ್ಷ ರೈ, ಶಂಕರ್ ರೈ ಗುತ್ತಿನಾರ್ ಕುಳಾಯಿ, ಬಾಲಕೃಷ್ಣ ಶೆಟ್ಟಿ ಹೊಸಬೆಟ್ಟು ಗುತ್ತಿನಾರ್, ಯೋಗೀಶ್ ಕುಳಾಯಿ, ದೇವಿ ಪ್ರಸಾದ್ ಶೆಟ್ಟಿ, ಸುರೇಶ್ ಕೊಟ್ಟಾರಿ ಹಾಗೂ ಯೋಗೀಶ್ ಸನಿಲ್ ಅವರು ಉಪಸ್ಥಿತರಿದ್ದು ಸಂಪೂರ್ಣ ಬೆಂಬಲ ಘೋಷಿಸಿದರು. ಅಲ್ಲದೆ ಸ್ಥಳೀಯ ಗುತ್ತು ಮನೆತನದ ಪ್ರಮುಖರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾಸಂಸ್ಥೆಗಳ ಮುಖ್ಯಸ್ಥರು ಹಾಗೂ ಜಾಗ ಕಳೆದುಕೊಂಡ ನೂರಾರು ಸ್ಥಳೀಯ ನಿವಾಸಿಗಳು ಸಭೆಯಲ್ಲಿ ಭಾಗವಹಿಸಿ ಒಗ್ಗಟ್ಟನ್ನು ಪ್ರದರ್ಶಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕೃಷಿ ಭೂಮಿಯನ್ನು ಮರಳಿ ಪಡೆದು, ಕೆರೆಯನ್ನು ಸ್ವಚ್ಛಗೊಳಿಸಿ ಇಡೀ ಪ್ರದೇಶವನ್ನು ಹಸಿರೀಕರಣಗೊಳಿಸುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕ ಹೋರಾಟ ಹಾಗೂ ಸರ್ಕಾರದ ಮೇಲೆ ಒತ್ತಡ ಹೇರುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಸಿ ನಿರ್ಣಯ ಕೈಗೊಳ್ಳಲಾಯಿತು.