ಯುಪಿ ಟಿ20 ಲೀಗ್ 2026 ಚಾಂಪಿಯನ್ ಆಗಿ ಹೊರಹೊಮ್ಮಿದ ರಿಂಕು ಸಿಂಗ್ ನೇತೃತ್ವದ ಮೀರತ್ ಮೇವರಿಕ್ಸ್!

ಉತ್ತರ ಪ್ರದೇಶ ಟಿ20 ಲೀಗ್‌ನ 4ನೇ ಆವೃತ್ತಿಯಲ್ಲಿ ಮೀರತ್ ಮೇವರಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಭಾನುವಾರ (ಸೆ.6) ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಹೈ-ವೋಲ್ಟೇಜ್ ಫೈನಲ್ ಪಂದ್ಯದಲ್ಲಿ, ಸ್ಟಾರ್ ಆಟಗಾರ ರಿಂಕು ಸಿಂಗ್ ನಾಯಕತ್ವದ ಮೀರತ್ ತಂಡವು ಭುವನೇಶ್ವರ್ ಕುಮಾರ್ ನೇತೃತ್ವದ ಲಕ್ನೋ ಫಾಲ್ಕನ್ಸ್ ವಿರುದ್ಧ 94 ರನ್‌ಗಳ ಭರ್ಜರಿ ಜಯ ಸಾಧಿಸಿ ಟ್ರೋಫಿಗೆ ಮುತ್ತಿಕ್ಕಿತು.

ಯುಪಿ ಟಿ20 ಲೀಗ್ ಇತಿಹಾಸದಲ್ಲೇ ಸತತ 4 ಬಾರಿಯೂ ಫೈನಲ್ ತಲುಪಿದ್ದ ಮೀರತ್ ಮೇವರಿಕ್ಸ್, ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತನ್ನ ಎರಡನೇ ಲೀಗ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜೋಶಿ ಶತಕದ ಅಬ್ಬರ:
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮೀರತ್ ಮೇವರಿಕ್ಸ್ ಆರಂಭದಲ್ಲೇ ನಾಯಕ ರಿಂಕು ಸಿಂಗ್ (1) ಅವರ ವಿಕೆಟ್ ಕಳೆದುಕೊಂಡು ಆಘಾತ ಎದುರಿಸಿತು. ಆದರೆ, ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ದಿವ್ಯಾಂಶ್ ಜೋಶಿ ಲಕ್ನೋ ಫಾಲ್ಕನ್ಸ್ ಬೌಲರ್‌ಗಳ ಬೆವರಿಳಿಸಿದರು. ಕೇವಲ 40 ಎಸೆತಗಳಲ್ಲಿ 105 ರನ್ ಚಚ್ಚಿದ ಜೋಶಿ ಅವರ ಬಿರುಗಾಳಿ ಶತಕದ ನೆರವಿನಿಂದ ಮೀರತ್ ಮೇವರಿಕ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 203 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಫಾಲ್ಕನ್ಸ್ ಪಲ್ಟಿ:
204 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಲಕ್ನೋ ಫಾಲ್ಕನ್ಸ್ ತಂಡವು ಮೀರತ್ ಬೌಲರ್‌ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ಲಕ್ನೋ ತಂಡವು 16 ಓವರ್‌ಗಳಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್ ಆಯಿತು. ಮೀರತ್ ಮೇವರಿಕ್ಸ್ ತಂಡದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ವಿಶಾಲ್ ಚೌಧರಿ 24 ರನ್ ನೀಡಿ 4 ವಿಕೆಟ್ ಕಬಳಿಸಿ ಲಕ್ನೋ ತಂಡದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಈ ಮೂಲಕ ಮೀರತ್ ಮೇವರಿಕ್ಸ್ ತಂಡಕ್ಕೆ 94 ರನ್‌ಗಳ ಭರ್ಜರಿ ಜಯ ತಂದುಕೊಟ್ಟರು.
ನಾಯಕ ರಿಂಕು ಸಿಂಗ್ ಸಂಭ್ರಮ:
ಈ ಗೆಲುವಿನ ಬಳಿಕ ಮಾತನಾಡಿದ ನಾಯಕ ರಿಂಕು ಸಿಂಗ್, “ಇಡೀ ತಂಡದ ಸಾಂಘಿಕ ಹೋರಾಟಕ್ಕೆ ಸಂದ ಜಯವಿದು. ದಿವ್ಯಾಂಶ್ ಅವರ ಶತಕ ಹಾಗೂ ಬೌಲರ್‌ಗಳ ಅದ್ಭುತ ಪ್ರದರ್ಶನ ನಮಗೆ ಸುಲಭ ಜಯ ತಂದುಕೊಟ್ಟಿತು. ಕಳೆದ ಬಾರಿ ಫೈನಲ್ ತಲುಪಿದರೂ ಪ್ರಶಸ್ತಿ ಗೆದ್ದಿರಲಿಲ್ಲ. ಆದರೆ ಈ ಬಾರಿ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ,” ಎಂದು ಸಂತಸ ಹಂಚಿಕೊಂಡರು.