ಆಸ್ತಿ ವಿವಾದದ ಬೇಗುದಿ: ಕಲೆಕ್ಟರೇಟ್ ಕಚೇರಿ ಮುಂದೆ ಮಹಿಳೆಯ ಆತ್ಮಹ*ತ್ಯೆ ಯತ್ನ

ಫತೇಪುರ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕಳೆದ ಎರಡು ವರ್ಷಗಳಿಂದ ನ್ಯಾಯಕ್ಕಾಗಿ ಹೋರಾಡುತ್ತಿದ್ದ ಮಹಿಳೆಯೊಬ್ಬರು ಬುಧವಾರ ಕಲೆಕ್ಟರೇಟ್ (ಜಿಲ್ಲಾ ಮ್ಯಾಜಿಸ್ಟ್ರೇಟ್) ಕಚೇರಿಯ ಹೊರಗೆ ಮೈಮೇಲೆ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮಹಿಳೆ ಬೆಂಕಿ ಹಚ್ಚಿಕೊಳ್ಳುವ ಮುನ್ನವೇ ಎಚ್ಚೆತ್ತ ಗೃಹರಕ್ಷಕ ಸಿಬ್ಬಂದಿ ಬೆಂಕಿಕಡ್ಡಿ ಪೆಟ್ಟಿಗೆಯನ್ನು ಕಸಿದುಕೊಂಡು ಆಕೆಯ ಜೀವ ಉಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಉಪ ತಹಶೀಲ್ದಾರ್ ಹಾಗೂ ಪೊಲೀಸರು, ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಖಾಗಾ ಕೊತ್ವಾಲಿ ಪ್ರದೇಶದ ಹಸನ್ಪುರ್ ಅಕೋಧಿಯಾ ನಿವಾಸಿ ಲೀಲಾವತಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇವರು 24 ವರ್ಷಗಳ ಹಿಂದೆ ಸುಲ್ತಾನ್ಪುರ್ ಘೋಷ್ ಪೊಲೀಸ್ ಠಾಣೆ ವ್ಯಾಪ್ತಿಯ ಲೋಧಿ ಕಾ ಪೂರ್ವಾ ನಿವಾಸಿ ಶಿವಬರನ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೇವಲ ಎರಡು ವರ್ಷಗಳ ಬಳಿಕ ಪತಿಯೊಂದಿಗೆ ತಮ್ಮ ತವರು ಮನೆಗೆ ಮರಳಿದ್ದರು. ಲೀಲಾವತಿಯವರ ಐವರು ಸಹೋದರರಲ್ಲಿ ಇಬ್ಬರು ನಿಧನರಾಗಿದ್ದು, ಕಿರಿಯ ಸಹೋದರ ಪ್ರಮೋದ್ ಅವಿವಾಹಿತನಾಗಿದ್ದಲ್ಲದೆ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದ. ಆತನ ಚಿಕಿತ್ಸೆಗಾಗಿ ಲೀಲಾವತಿ ಸ್ವಸಹಾಯ ಸಂಘವೊಂದರಿಂದ 6 ಲಕ್ಷ ರೂ. ಸಾಲ ಪಡೆದಿದ್ದರು. ಇದಕ್ಕೆ ಪ್ರತಿಯಾಗಿ ಸಹೋದರ ತನ್ನ ಪಾಲಿನ ಮನೆಯ ದಾಖಲೆಗಳನ್ನು ಲೀಲಾವತಿಗೆ ನೀಡಿದ್ದ. ಈ ಮನೆಯಲ್ಲಿ ಆಕೆ ಕಳೆದ 20 ವರ್ಷಗಳಿಂದ ವಾಸವಿದ್ದಳು. ಆದರೆ, ಈ ಆಸ್ತಿಯ ಮೇಲೆ ಕಣ್ಣಿಟ್ಟಿದ್ದ ಇತರ ಸಹೋದರರು, 2024ರ ನವೆಂಬರ್ 13ರಂದು ಲೀಲಾವತಿ ಮತ್ತು ಆಕೆಯ ಕುಟುಂಬ ಸಮಾರಂಭವೊಂದಕ್ಕೆ ತೆರಳಿದ್ದಾಗ ಮನೆಯ ಬೀಗ ಒಡೆದು ವಸ್ತುಗಳನ್ನು ಹೊರಗೆಸೆದಿದ್ದರು. ಈ ಬಗ್ಗೆ ಪೊಲೀಸ್ ಹಾಗೂ ಆಡಳಿತ ಮಂಡಳಿಗೆ ಹಲವಾರು ಅರ್ಜಿಗಳನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಸದ್ಯ ಆಕೆ ತನ್ನ ಮೂವರು ಹೆಣ್ಣುಮಕ್ಕಳೊಂದಿಗೆ ಬೇರೆಯವರ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಬದುಕು ಸಾಗಿಸುತ್ತಿದ್ದಾಳೆ.
ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ ಮಾಹಿತಿ ತಿಳಿದ ತಕ್ಷಣ ಉಪ ತಹಸೀಲ್ದಾರ್ ಅಮರೇಶ್ ಸಿಂಗ್ ಮತ್ತು ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದರು. ಘಟನೆ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಪ ತಹಸೀಲ್ದಾರ್ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಎಎಸ್ಪಿ ಜ್ಞಾನ ಪ್ರಕಾಶ್ ರೈ, ‘ಭದ್ರತಾ ಸಿಬ್ಬಂದಿ ಸಮಯಪ್ರಜ್ಞೆಯಿಂದ ಮಹಿಳೆಯನ್ನು ರಕ್ಷಿಸಿದ್ದಾರೆ. ಆಸ್ತಿ ಹಂಚಿಕೆ ಮತ್ತು ಹಣದ ವಹಿವಾಟಿಗೆ ಸಂಬಂಧಿಸಿದಂತೆ ಮಹಿಳೆ ತನ್ನ ಸಹೋದರರೊಂದಿಗೆ ವಿವಾದ ಹೊಂದಿದ್ದು, ಈ ವಿಚಾರದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು. ಕಲೆಕ್ಟರೇಟ್ಗೆ ಬರುವಾಗ ಲೀಲಾವತಿ ಒಂದು ಲೀಟರ್ ಬಾಟಲಿಯಲ್ಲಿ ಡೀಸೆಲ್ ಬಚ್ಚಿಟ್ಟುಕೊಂಡು ಬಂದಿದ್ದಳು. ಆಕೆ ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗುತ್ತಿದ್ದಂತೆ, ಇದನ್ನು ಗಮನಿಸಿದ ಗೃಹರಕ್ಷಕ ದಳದ ಪಂಚ ಗುಲಾಮ್ ಚೌಧರಿ ಓಡಿ ಬಂದು ಆಕೆಯ ಕೈ ಹಿಡಿದು ತಡೆದರು. ಬಳಿಕ ಸ್ಥಳಕ್ಕೆ ಬಂದ ಕಚಾರಿ ಚೌಕಿ ಪೊಲೀಸರು, ಮಹಿಳೆಯನ್ನು ಆವರಣದಲ್ಲಿರುವ ಕೊಳವೆ ಬಾವಿಯ ಬಳಿ ಕರೆದೊಯ್ದು ಆಕೆಯ ಮೈಮೇಲೆ ನೀರು ಸುರಿದು ಶುಚಿಗೊಳಿಸಿದರು. ತದನಂತರ ಪೊಲೀಸ್ ಚೌಕಿಯಲ್ಲಿ ಕೂರಿಸಿ ಸಾಂತ್ವನ ಹೇಳಿದ ಪೊಲೀಸರು, ಸಂಜೆ ಆಕೆಯ ಕುಟುಂಬ ಸದಸ್ಯರು ಬಂದ ಬಳಿಕ ಅವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.
