Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗರ್ಭಿಣಿಯ ಮೇಲೆ ಪೊಲೀಸರ ದೌರ್ಜನ್ಯ; ವೀಡಿಯೋ ವೈರಲ್ ಆಗುತ್ತಿದ್ದಂತೆ ತೀವ್ರ ಆಕ್ರೋಶ!

Spread the love

ನೆದರ್‌ಲ್ಯಾಂಡ್ಸ್‌ನ ಜೀಸ್ಟ್ ನಗರದ ನಿರಾಶ್ರಿತರ ಆಶ್ರಯ ಕೇಂದ್ರವೊಂದರಲ್ಲಿ ಡಚ್ ಪೊಲೀಸರು ಒಂಬತ್ತು ತಿಂಗಳ ಗರ್ಭಿಣಿಯೊಬ್ಬರನ್ನು ಅತ್ಯಂತ ಕ್ರೂರವಾಗಿ ನೆಲಕ್ಕೆ ತಳ್ಳಿ ಬಂಧಿಸಲು ಯತ್ನಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದೌರ್ಜನ್ಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವ ಹಕ್ಕುಗಳ ಸಂಘಟನೆಗಳು ಪೊಲೀಸರ ಈ ಅತಿಯಾದ ಬಲಪ್ರಯೋಗವನ್ನು ತೀವ್ರವಾಗಿ ಖಂಡಿಸಿದ್ದು, ಘಟನೆಯ ಕುರಿತು ಅಧಿಕೃತ ಆಂತರಿಕ ತನಿಖೆ ಆರಂಭವಾಗಿದೆ.
ಆಶ್ರಯ ಕೇಂದ್ರದ ಹೊರಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾಗ, ಆತನ ಗರ್ಭಿಣಿ ಪತ್ನಿ ಅಧಿಕಾರಿಗಳ ಬಳಿ ಬಂದು ಆತನೊಂದಿಗೆ ತನಗೂ ಹೋಗಲು ಅವಕಾಶ ನೀಡುವಂತೆ ವಿನಂತಿಸಿದ್ದಾರೆ. ಈ ವೇಳೆ ಒಬ್ಬ ಪೊಲೀಸ್ ಅಧಿಕಾರಿ ಆಕೆಯನ್ನು ಹಿಡಿದು ಭೀಕರವಾಗಿ ನೆಲಕ್ಕೆ ತಳ್ಳಿದ್ದಾನೆ. ಇದನ್ನು ಕಂಡು ಸುತ್ತಮುತ್ತಲಿದ್ದ ಸಾರ್ವಜನಿಕರು ಆಘಾತ ವ್ಯಕ್ತಪಡಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಗಜಾ ಮೂಲದ ಫೆಲೆಸ್ತೀನ್ ನಿರಾಶ್ರಿತ 30 ವರ್ಷದ ವೆಸಾಮ್ ರಿದಾ ಫಾತಿ ಮಿಕ್ದಾದ್ ಎಂದು ಗುರುತಿಸಲಾಗಿದೆ. ಈತನನ್ನು ನೆದರ್‌ಲ್ಯಾಂಡ್ಸ್‌ನಿಂದ ಈಜಿಪ್ಟ್‌ಗೆ ಗಡೀಪಾರು ಮಾಡಲು ಅಧಿಕಾರಿಗಳು ಮುಂದಾಗಿದ್ದರು ಎನ್ನಲಾಗಿದೆ.
ಈ ಭೀಕರ ಘಟನೆ ನಡೆದು ಇಡೀ ಕುಟುಂಬ ತೀವ್ರ ಆತಂಕ ಹಾಗೂ ಮಾನಸಿಕ ಒತ್ತಡ ಅನುಭವಿಸಿದ ಬೆನ್ನಲ್ಲೇ, ಆ ಗರ್ಭಿಣಿ ಮಹಿಳೆ ಆಸ್ಪತ್ರೆಯಲ್ಲಿ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ‘ರೀಮ್’ ಎಂದು ಹೆಸರಿಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮಗುವಿನ ಜನನದ ಸುದ್ದಿ ತಿಳಿಯುತ್ತಿದ್ದಂತೆಯೇ ನೆಟ್ಟಿಗರು ಪೊಲೀಸರ ವಿರುದ್ಧ ಮತ್ತಷ್ಟು ಆಕ್ರೋಶ ಹೊರಹಾಕಿದ್ದಾರೆ. ಹೆರಿಗೆಯ ಹಂತದಲ್ಲಿದ್ದ ಮಹಿಳೆಯ ಮೇಲಿನ ಈ ಹಲ್ಲೆ ತಾಯಿ-ಮಗುವಿನ ಜೀವಕ್ಕೆ ಕಂಟಕವಾಗಬಹುದಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ತನಗಾದ ಅನ್ಯಾಯವನ್ನು ಹಂಚಿಕೊಂಡಿರುವ ವೆಸಾಮ್ ಮಿಕ್ದಾದ್, “ನನ್ನ ಗಡೀಪಾರು ಆದೇಶದ ಆತಂಕದಲ್ಲಿದ್ದ ನಾನು ಬೇಸರದಿಂದ ನನ್ನದೇ ಕೋಣೆಯ ಟಿವಿ ಮತ್ತು ಬಾಗಿಲನ್ನು ಹಾನಿ ಮಾಡಿದ್ದೆ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ. ನನ್ನ ಪತ್ನಿ 9 ತಿಂಗಳ ಗರ್ಭಿಣಿ ಎಂದು ಪೊಲೀಸರಿಗೂ ಗೊತ್ತಿತ್ತು. ನಾನು ಗೌರವಯುತವಾಗಿ ಅವರೊಂದಿಗೆ ಬರಲು ಸಿದ್ಧನಿದ್ದರೂ, ನನ್ನ ಕಣ್ಣೆದುರೇ ಗರ್ಭಿಣಿ ಪತ್ನಿಯನ್ನು ಕ್ರೂರವಾಗಿ ನೆಲಕ್ಕೆ ತಳ್ಳಲಾಯಿತು. ನಮಗೆ ನ್ಯಾಯ ಎಲ್ಲಿದೆ?” ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಮತ್ತು ಸಾರ್ವಜನಿಕರ ಆತಂಕ ತಮಗೆ ತಲುಪಿದ್ದು, ಘಟನೆಯ ಸಂದರ್ಭದಲ್ಲಿ ಅಧಿಕಾರಿಗಳು ನಿಯಮಾವಳಿಗಳ ಪ್ರಕಾರವೇ ಬಲಪ್ರಯೋಗ ಮಾಡಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಇಲಾಖಾ ತನಿಖೆ ನಡೆಸಲಾಗುತ್ತಿದೆ ಎಂದು ಡಚ್ ಪ್ರಾದೇಶಿಕ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *