ಪಾಟ್ನಾ: ಖಾನ್ ಸರ್ ಕೋಚಿಂಗ್ ಇನ್‌ಸ್ಟಿಟ್ಯೂಟ್ ಹೊರಗೆ ಗುಂಡಿನ ದಾಳಿ; ಸೆಕ್ಯೂರಿಟಿ ಗಾರ್ಡ್‌ಗೆ ಗಾಯ!

ಪಾಟ್ನಾ: ಬಿಹಾರದ ಪಾಟ್ನಾದಲ್ಲಿ ‘ಖಾನ್ ಸರ್ ಎಂದು ಖ್ಯಾತಿ ಪಡೆದಿರುವ ಶಿಕ್ಷಣ ತಜ್ಞ ಹಾಗೂ ಯೂಟ್ಯೂಬರ್ ಫೈಝಲ್ ಖಾನ್ ಅವರ ತರಬೇತಿ ಸಂಸ್ಥೆಯ ಹೊರಗೆ ಗುಂಡಿನ ದಾಳಿ ನಡೆದಿರುವ ಬಗ್ಗೆ ವರದಿಯಾಗಿದೆ.
ಘಟನೆಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
“ಈ ಘಟನೆಯು ಸ್ಥಳೀಯ ಕೋಚಿಂಗ್ ಸಂಸ್ಥೆಗಳ ನಿರ್ವಾಹಕರ ನಡುವಿನ ಪೈಪೋಟಿ ಅಥವಾ ವೈಮನಸ್ಸಿಗೆ ಸಂಬಂಧಿಸಿರಬಹುದು” ಎಂದು ಪ್ರಾಥಮಿಕವಾಗಿ ಪೊಲೀಸ್ ಮೂಲಗಳು ತಿಳಿಸಿದೆ.

“ಇದು ದೈಹಿಕ ಹಲ್ಲೆಗೆ ಸಂಬಂಧಿಸಿದ ಪ್ರಕರಣ. ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರ ಹೇಳಿಕೆ ಮತ್ತು ಸ್ಥಳೀಯರ ಹೇಳಿಕೆ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ” ಎಂದು ಪಾಟ್ನಾ ಎಸ್‌ಎಸ್‌ಪಿ ಕಾರ್ತಿಕೇಯ ಕೆ ಶರ್ಮಾ ತಿಳಿಸಿದ್ದಾರೆ.
“ಗಾಯಗೊಂಡ ವ್ಯಕ್ತಿ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಅವರು ಹೇಳಿದರು.
ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಘಟನೆಯನ್ನು ಖಂಡಿಸಿ ಖಾನ್ ಸರ್ ಅವರ ಕೋಚಿಂಗ್ ಇನ್ಸಿಟ್ಯೂಟ್‌ನ ಹೊರಗೆ ವಿದ್ಯಾರ್ಥಿಗಳು ಜಮಾಯಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದ್ದಾರೆ. ಒಂದು ದಿನದ ಮಟ್ಟಿಗೆ ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.