Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಪಾರ್ಟಿ: ಎಐಎಸ್‌ಎಟಿಎಸ್ ಕಂಪನಿಯ 4 ಉನ್ನತ ಅಧಿಕಾರಿಗಳ ವಜಾ

Spread the love

ಅಹ್ಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ಸಹಭಾಗಿತ್ವ ಸಂಸ್ಥೆ ಕಚೇರಿಯಲ್ಲಿ ಪಾರ್ಟಿ! ನಾಲ್ವರ ವಜಾ

ಗುರುಗ್ರಾಮ: ಇದೇ ಜೂ. 12ರಂದು ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾವಿಮಾನ ದುರಂತವು ದೇಶವನ್ನೇ ಬೆಚ್ಚಿಬಿಟ್ಟಿತು. ಲಂಡನ್‌ಗೆ ತೆರಳುತ್ತಿದ್ದ ಆ ವಿಮಾನ, ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಹ್ಮದಾಬಾದ್ ನ ಹೊರವಲಯದಲ್ಲಿರುವ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ ನಿಲಯದ ಮೇಲೆ ಅಪ್ಪಳಿಸಿತ್ತು.

ಆ ದುರ್ಘಟನೆಯಲ್ಲಿ ಒಟ್ಟು 259 ಮಂದಿ ಸಾವಿಗೀಡಾಗಿದ್ದರು.

ಈ ದುರಂತದ ನೋವು ಇನ್ನೂ ಜೀವಂತವಾಗಿದೆ. ಆ ದುಃಸ್ವಪ್ನವನ್ನು ಯಾರೂ ಮರೆತಿಲ್ಲ. ಈಗಲೂ ಜನರು ವಿಮಾನದಲ್ಲಿ ಪ್ರಯಾಣಿಸಲು ಅಥವಾ ಏರ್ ಇಂಡಿಯಾ ವಿಮಾನ ಹತ್ತಲು ಹೆದರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಏರ್ ಇಂಡಿಯಾದ ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳ ಪಾಲುದಾರ ಸಂಸ್ಥೆಯಾದ, ಸಿಂಗಾಪುರ ಮೂಲದ ಎಐಎಸ್‌ಎಟಿಎಸ್ ಕಂಪನಿಯ ಗುರಗಾಂವ್ ಕಚೇರಿಯಲ್ಲಿ ಜೂ. 26ರಂದು ಒಂದು ಪಾರ್ಟಿ ನಡೆದಿದೆ. ಅದರಲ್ಲಿ ಇಡೀ ಕಚೇರಿಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಕುಣಿದು ಕುಪ್ಪಳಿಸಿದ್ದಾರೆ. ಈ ಪಾರ್ಟಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ, ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇಂತಹ ದುರಂತ ಸಂಭವಿಸಿದ ಕೆಲವೇ ದಿನಗಳಲ್ಲಿ ಈ ರೀತಿ ಆಚರಣೆ ಮಾಡಿದ್ದು, ಜನರ ಕೋಪಕ್ಕೆ ಕಾರಣವಾಗಿದ್ದು, ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದಾರೆ. “ಇಂಥ ದುರಂತದ ಸಂದರ್ಭದಲ್ಲಿ ಇಂತಹ ಆಚರಣೆ ಬೇಕಾ? ಇದು ಸಂಪೂರ್ಣ ಆಭಾಸ ಎಂದೆನ್ನಿಸುುವುದಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು, ಇಂಥ ದುಃಖದ ಸಮಯದಲ್ಲಿ ಈ ರೀತಿ ಆಚರಣೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.

ನಾಲ್ವರು ಹಿರಿಯ ಅಧಿಕಾರಿಗಳ ತಲೆದಂಡ

ಜನರಿಂದ ಇಂಥ ಕಮೆಂಟ್ ಗಳು ಬರುತ್ತಲೇ, ಎಐಎಸ್‌ಎಟಿಎಸ್ ಕಂಪನಿ ತಕ್ಷಣ ಕ್ರಮ ಕೈಗೊಂಡಿದೆ. ಕಚೇರಿಯಲ್ಲಿ ಪಾರ್ಟಿ ಮಾಡಲು ಅನುಮತಿ ಕೋರಿದ್ದ ನಾಲ್ವರು ಹಿರಿಯ ಅಧಿಕಾರಿಗಳಿಗೆ ರಾಜೀನಾಮೆ ಪಡೆದಿದೆ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಇಬ್ಬರು ಹಿರಿಯ ಉಪಾಧ್ಯಕ್ಷರು ಹಾಗೂ ತರಬೇತಿ ಮುಖ್ಯಸ್ಥರನ್ನು ಕೆಲಸ ಕಳೆದುಕೊಂಡಿದ್ದಾರೆ. ಇದರ ಜೊತೆಗೆ, ಇತರ ಕೆಲವು ಉದ್ಯೋಗಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಇದರ ಬೆನ್ನಲ್ಲೇ ಟ್ವಿಟರ್ ಮೂಲಕ ಸಾರ್ವಜನಿಕರಿಗೆ ತಿಳಿ ಹೇಳಿರುವ ಸಂಸ್ಥೆ, “ಏರ್ ಇಂಡಿಯಾ ವಿಮಾನ ದುರಂತದಿಂದ ಬಳಲುತ್ತಿರುವ ಕುಟುಂಬಗಳ ಜೊತೆ ನಾವಿದ್ದೇವೆ. ಆ ಕುಟುಂಬಗಳು ದುಃಖದಲ್ಲಿರುವಾಗ ನಾವು ಪಾರ್ಟಿ ಮಾಡಿರುವುದು ಸರಿಯಲ್ಲ ಎಂಬುದು ನಮಗೆ ಅನ್ನಿಸಿದೆ. ಹಾಗಾಗಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದೇವೆ” ಎಂದು ಕಂಪನಿ ಹೇಳಿದೆ.
ಕಂಪನಿಯ ಹಿನ್ನೆಲೆ

ಮೇಲೆ ತಿಳಿಸಿರುವಂತೆ, ಎಐಎಸ್‌ಎಟಿಎಸ್ ಕಂಪನಿಯು ಟಾಟಾ ಗ್ರೂಪ್ ಮಾಲೀಕತ್ವದ ಏರ್ ಇಂಡಿಯಾ ಸಂಸ್ಥೆಯ ವಿಮಾನಗಳಿಗೆ ಗ್ರೌಂಡ್ ಸರ್ವೀಸಸ್ ನೀಡುತ್ತದೆ. ಇದರ ಮಾತೃಕಂಪನಿ ಸಿಂಗಾಪುರದ ಎಸ್‌ಎಟಿಎಸ್ ಕಂಪನಿ. ಗ್ರೌಂಡ್ ಹ್ಯಾಂಡ್ಲಿಂಗ್ ಸೇವೆಗಳನ್ನು ನೀಡುವಂತೆ ಏರ್ ಇಂಡಿಯಾ ಸಂಸ್ಥೆಯು ಸಿಂಗಾಪುರದ ಎಸ್‌ಎಟಿಎಸ್ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿರುವುದರಿಂದ ಗ್ರೌಂಡ್ ಹ್ಯಾಂಡ್ಲಿಂಗ್ ಗಾಗಿ ಪ್ರತ್ಯೇಕ ಕಂಪನಿಯನ್ನು ಸ್ಥಾಪಿಸಲಾಗಿದೆ. ಅದೇ ಎಐಎಸ್‌ಎಟಿಎಸ್ ಕಂಪನಿ.
ಏರ್ ಇಂಡಿಯಾ ವಿಮಾನಗಳ ಸಂಖ್ಯೆ ಇಳಿಕೆ

ಜೂ. 21 ರಿಂದ ಜು. 15ರವರೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟವನ್ನು ಏರ್‌ ಇಂಡಿಯಾ ಕಡಿಮೆ ಮಾಡಿದೆ. ಮುಖ್ಯವಾಗಿ ದೊಡ್ಡ ಗಾತ್ರದ ವಿಮಾನಗಳ (ಡ್ರೀಮ್‌ಲೈನರ್‌ 787 ಸರಣಿ ವಿಮಾನಗಳು) ಹಾರಾಟವನ್ನು ಶೇ.15 ರಷ್ಟು ಕಡಿಮೆ ಮಾಡಲಾಗಿದೆ. ಇದೊಂದು ತಾತ್ಕಾಲಿಕ ನಡೆ ಎಂದು ಏರ್ ಇಂಡಿಯಾ ಪ್ರಕಟಿಸಿದೆ.
ವಿಮಾನಗಳ ಹಾರಾಟ ರದ್ದು

ಇದಕ್ಕೂ ಮೊದಲು, ನಾಲ್ಕು ಅಂತಾರಾಷ್ಟ್ರೀಯ ಹಾಗೂ ನಾಲ್ಕು ದೇಶೀಯ ವಿಮಾನಗಳ ಹಾರಾಟವನ್ನು ಏರ್ ಇಂಡಿಯಾ ರದ್ದು ಮಾಡಿತ್ತು. ಪ್ರಯಾಣಿಕರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿತ್ತು. ಅಹ್ಮದಾಬಾದ್ ವಿಮಾನ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಲು ಪ್ರಯಾಣಿಕರು ಹಿಂದೇಟು ಹಾಕುತ್ತಿದ್ದುದು ಹಾಗೂ ಕೆಲವು ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷಗಳು ಕಂಡುಬಂದಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿತ್ತು


Spread the love
Share:

administrator

Leave a Reply

Your email address will not be published. Required fields are marked *