ಗದಗ ಬರಪೀಡಿತ ಘೋಷಣೆಗೆ ಅಕ್ಟೋಬರ್ 10ರ ಗಡುವು: ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಎಂದ ಎಚ್.ಕೆ. ಪಾಟೀಲ್!

ಗದಗ: ಅಕ್ಟೋಬರ್ 10 ರೊಳಗೆ ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಮಾಜಿ ಸಚಿವ ಎಚ್.ಕೆ. ಪಾಟೀಲ್ ಭಾನುವಾರ ಹೇಳಿದ್ದಾರೆ.
ಆದಾಗ್ಯೂ, ಅಕ್ಟೋಬರ್ 2 ರ ಮೊದಲು ಘೋಷಣೆಯನ್ನು ಮಾಡಲು ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಅವರು ಪ್ರತಿಪಾದಿಸಿದರು.
“ಗದಗ ತಾಲೂಕನ್ನು ಬರಪೀಡಿತ ಎಂದು ಘೋಷಿಸದಿದ್ದರೆ, ನಾನು ಸ್ವಾಭಾವಿಕವಾಗಿಯೇ ನಿಮ್ಮ (ರೈತರು ಮತ್ತು ಜನರು) ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನೀವು ನನ್ನೊಂದಿಗಿರುವುದರಿಂದ ನಾನು ಶಾಸಕ. ನೀವು ನನ್ನನ್ನು ರಾಜೀನಾಮೆ ನೀಡಬೇಕೆಂದು ಬಯಸಿದರೆ, ಅಕ್ಟೋಬರ್ 10 ರೊಳಗೆ ಗದಗವನ್ನು ಬರಪೀಡಿತ ಎಂದು ಘೋಷಿಸದಿದ್ದರೆ ನಾನು ನನ್ನ ರಾಜೀನಾಮೆಯನ್ನು ಸಲ್ಲಿಸುತ್ತೇನೆ” ಎಂದು ಪಾಟೀಲ್ ರೈತರಿಗೆ ತಿಳಿಸಿದರು.
ಅವರನ್ನು ಉದ್ದೇಶಿಸಿ ಮಾತನಾಡಿದ ಪಾಟೀಲ್, ತಾವು “ಅಸಹಾಯಕ” ಅಲ್ಲ ಮತ್ತು ಘೋಷಣೆಯನ್ನು ಆದಷ್ಟು ಬೇಗ ಮಾಡುವಂತೆ ನೋಡಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದರು.
“ನಾನು ಅಷ್ಟೊಂದು ಅಸಹಾಯಕನಲ್ಲ. ಮೂರು ದಿನಗಳಲ್ಲಿ ಅದನ್ನು ಪೂರ್ಣಗೊಳಿಸಲು ಏನು ಮಾಡಬೇಕೋ ಅದನ್ನು ನಾನು ಮಾಡುತ್ತೇನೆ. ಗಾಂಧಿ ಜಯಂತಿಗೂ ಮುನ್ನ, ಅಂದರೆ ಅಕ್ಟೋಬರ್ 2 ರ ಮೊದಲು ಗದಗ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ನಾನು ಎಲ್ಲ ಪ್ರಯತ್ನಗಳನ್ನು ಮಾಡುತ್ತೇನೆ” ಎಂದು ಅವರು ಹೇಳಿದರು.ಗದಗ ತಾಲ್ಲೂಕನ್ನು ಬರಪೀಡಿತ ಎಂದು ಘೋಷಿಸಲು ಅರ್ಹತೆ ಇದ್ದರೂ ಅದನ್ನು ತಡೆಯಲು ಯಾರಾದರೂ ಪ್ರಯತ್ನಿಸಿದರೆ ನಾನು ರಾಜೀನಾಮೆ ನೀಡುತ್ತೇನೆ ಎಂದು ಪಾಟೀಲ್ ಎಚ್ಚರಿಸಿದರು.
ಕರ್ನಾಟಕದ 124 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದ್ದು, ಇತರ ಪ್ರದೇಶಗಳಲ್ಲಿಯೂ ಮೌಲ್ಯಮಾಪನ ಮುಂದುವರೆದಿದೆ.
ಇದಕ್ಕೂ ಮುನ್ನ ಮಾತನಾಡಿದ ಉಪಮುಖ್ಯಮಂತ್ರಿ ಹಾಗೂ ಕಂದಾಯ ಖಾತೆಯನ್ನು ಹೊಂದಿರುವ ಜಿ. ಪರಮೇಶ್ವರ, ಕರ್ನಾಟಕಾದ್ಯಂತ 200 ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸುವ ಸಾಧ್ಯತೆಯಿದೆ ಎಂದು ಹೇಳಿದರು. ಸರ್ಕಾರವು ನಿಗದಿತ ಮಾನದಂಡಗಳು ಮತ್ತು ವಾಸ್ತವಿಕ ಪರಿಶೀಲನೆಯ ಆಧಾರದ ಮೇಲೆ ಹಂತ ಹಂತವಾಗಿ ಅವುಗಳನ್ನು ನಿರ್ಣಯಿಸುತ್ತದೆ.
ಮೊದಲ ಹಂತದಲ್ಲಿ 101 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದ್ದು, ನಂತರ ಇನ್ನೂ 24 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸಲಾಗಿದೆ ಎಂದು ಅವರು ಹೇಳಿದರು. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಹೆಚ್ಚುವರಿಯಾಗಿ 52 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಿಸುವ ನಿರೀಕ್ಷೆಯಿದೆ.
ಮುಂದಿನ ಹಂತದಲ್ಲಿ, ಮೌಲ್ಯಮಾಪನದ ಆಧಾರದ ಮೇಲೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಸುಮಾರು 50 ತಾಲ್ಲೂಕುಗಳಲ್ಲಿ ಸತ್ಯ ಶೋಧನೆಯನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಹೇಳಿದರು.
