ಮದುವೆ ಸಮಾರಂಭದಲ್ಲಿ ಶಾಸಕನ ವರ್ತನೆಗೆ ಆಕ್ಷೇಪ: ಚಾಲಕನಿಗೆ ಒದ್ದ ವಿಡಿಯೋ ವೈರಲ್

ಪಾಟ್ನಾ: ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ ಅನಂತ್ ಸಿಂಗ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ತಮ್ಮ ಮಗಳ ಮದುವೆ ಸಮಾರಂಭದಲ್ಲಿ ಕಾರಿನ ಸನ್ರೂಫ್ನಿಂದ ಹೊರಬಂದು ಅತಿಥಿಗಳಿಗೆ ಕೈಬೀಸಿ ಸ್ವಾಗತಿಸುತ್ತಿದ್ದ ವೇಳೆ, ಚಾಲಕನಿಗೆ ಒದ್ದಿರುವ ವಿಡಿಯೋ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ವೈರಲ್ ಆಗುತ್ತಿದ್ದಂತೆ ಶಾಸಕರ ವರ್ತನೆಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ಸನ್ರೂಫ್ನಿಂದ ನಿಂತು ಚಾಲಕನಿಗೆ ಒದ್ದ ಸಿಂಗ್
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಅನಂತ್ ಸಿಂಗ್ ಅವರು ಎಸ್ಯುವಿ ಕಾರಿನ ಸನ್ರೂಫ್ನಿಂದ ಹೊರಬಂದು ಜನರತ್ತ ಕೈಬೀಸುತ್ತಿರುವುದು ಕಾಣಿಸುತ್ತದೆ. ಕಾರಿನ ಸುತ್ತಲೂ ಬೆಂಬಲಿಗರು ಮತ್ತು ಅತಿಥಿಗಳು ಸೇರಿದ್ದು, ಶಾಸಕರನ್ನು ನೋಡಲು ಮುಗಿಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಅವರು ಚಾಲಕನ ಮೇಲೆ ಕೋಪಗೊಂಡಂತೆ ಕಾಣಿಸಿಕೊಂಡು, ಸನ್ರೂಫ್ನಿಂದಲೇ ಆತನಿಗೆ ಕಾಲಿನಿಂದ ಒದೆಯುತ್ತಾರೆ. ಈ ದೃಶ್ಯವನ್ನು ಕೆಲವರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಬಳಿಕ ಎಕ್ಸ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ಬಳಿಕ ಶಾಸಕರ ವರ್ತನೆ ಕುರಿತು ಪರ-ವಿರೋಧದ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅದ್ಧೂರಿಯಾಗಿ ನಡೆದ ಮಗಳ ಮದುವೆ
ಅನಂತ್ ಸಿಂಗ್ ಅವರ ಪುತ್ರಿ ಶಿವಾಂಗಿ ಸಿಂಗ್ ಅವರ ವಿವಾಹ ಸಮಾರಂಭದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ನವೆಂಬರ್ 25ರಂದು ಬಿಹಾರದ ಪಾಟ್ನಾ ಜಿಲ್ಲೆಯ ನದ್ವಾನ್ ಗ್ರಾಮದಲ್ಲಿ ಮದುವೆ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಸಾವಿರಾರು ಅತಿಥಿಗಳು ಭಾಗವಹಿಸಿದ್ದ ಈ ಮದುವೆಯಲ್ಲಿ ಭವ್ಯವಾದ ಊಟದ ವ್ಯವಸ್ಥೆ, ಕುದುರೆ ಓಟ ಹಾಗೂ ಐಷಾರಾಮಿ ವಾಹನಗಳ ಪ್ರದರ್ಶನವೂ ಗಮನ ಸೆಳೆದಿತ್ತು. ಮದುವೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದೀಗ ಚಾಲಕನಿಗೆ ಒದೆಯುತ್ತಿರುವ ದೃಶ್ಯವೂ ಚರ್ಚೆಗೆ ಗ್ರಾಸವಾಗಿದೆ.**ಯಾರು ಈ ಅನಂತ್ ಸಿಂಗ್?** ‘ಛೋಟೆ ಸರ್ಕಾರ್’ ಎಂದೇ ಪರಿಚಿತರಾಗಿರುವ ಅನಂತ್ ಸಿಂಗ್ ಬಿಹಾರದ ಮೋಕಾಮಾ ಕ್ಷೇತ್ರದ ಶಾಸಕ. ಬಿಹಾರ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಅವರು, ಈ ಹಿಂದೆ ಹಲವು ವಿವಾದಗಳ ಕಾರಣದಿಂದಲೂ ಸುದ್ದಿಯಲ್ಲಿದ್ದರು. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಚಾಲಕನಿಗೆ ಒದೆಯಲು ಕಾರಣವೇನು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಈ ಘಟನೆಯ ಕುರಿತು ಅನಂತ್ ಸಿಂಗ್ ಅವರ ಪ್ರತಿಕ್ರಿಯೆಯೂ ವರದಿಯಾಗಿಲ್ಲ.