ತಿರುಮಲದಲ್ಲಿ ಭಕ್ತರಿಗೆ ಹೊಸ ಸೌಲಭ್ಯ: ಸರತಿ ಸಾಲಿನಲ್ಲಿ ನಿಂತಲ್ಲೇ ಪ್ರಸಾದ ನೀಡಲು ‘ಮೂವಿಂಗ್ ಟೇಬಲ್’ ವ್ಯವಸ್ಥೆ ಜಾರಿ!

ಹೈದರಾಬಾದ: ತಿರುಮಲದಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುವ ಭಕ್ತರಿಗೆ ಪ್ರಸಾದ ವಿತರಣೆ ಮತ್ತಷ್ಟು ಸುಲಭವಾಗಲಿದೆ. ಭಕ್ತರ ಅನುಕೂಲಕ್ಕಾಗಿ ತಿರುಮಲ ತಿರುಪತಿ ದೇವಸ್ಥಾನ ಸಮಿತಿ ಹೊಸ ‘ಮೂವಿಂಗ್ ಟೇಬಲ್’ ವ್ಯವಸ್ಥೆಯನ್ನು ಪರಿಚಯಿಸಿದೆ. ಪ್ರಸಾದ ಕೌಂಟರ್‌ಗಳಲ್ಲಿ ಉಂಟಾಗುವ ಜನಸಂದಣಿಯನ್ನು ಕಡಿಮೆ ಮಾಡುವುದರ ಜೊತೆಗೆ, ಭಕ್ತರಿಗೆ ತ್ವರಿತವಾಗಿ ಪ್ರಸಾದ ತಲುಪಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮೂವಿಂಗ್ ಟೇಬಲ್ ಅನ್ನು ವಿನ್ಯಾಸಗೊಳಿಸಿ ಅಳವಡಿಸಲಾಗಿದೆ. ಸುಮಾರು 7 ಮೀಟರ್ ಉದ್ದದ ಈ ಮೇಜು ಕನ್ವೇಯರ್ ಬೆಲ್ಟ್‌ನಂತೆ ನಿರಂತರವಾಗಿ ಚಲಿಸುತ್ತದೆ. ಸಿಬ್ಬಂದಿ ಪ್ರಸಾದದ ತಟ್ಟೆಗಳನ್ನು ಮೇಜಿನ ಮೇಲೆ ಇರಿಸಿದ ಬಳಿಕ, ಸರತಿ ಸಾಲಿನಲ್ಲಿ ನಿಂತಿರುವ ಭಕ್ತರು ತಾವು ನಿಂತ ಸ್ಥಳದಲ್ಲೇ ಪ್ರಸಾದವನ್ನು ಪಡೆದುಕೊಳ್ಳಬಹುದು.ಈ ಹಿಂದೆ ಪ್ರಾಯೋಗಿಕವಾಗಿ ಮೂವಿಂಗ್ ಟೇಬಲ್ ವ್ಯವಸ್ಥೆಯನ್ನು ಅಳವಡಿಸಿ ಪರೀಕ್ಷಿಸಲಾಗಿತ್ತು. ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಇದೀಗ ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು TTD ನಿರ್ಧರಿಸಿದೆ. ಮುಂದಿನ ಹಂತದಲ್ಲಿ ವೈಕುಂಠಂ ಕ್ಯೂ ಕಾಂಪ್ಲೆಕ್ಸ್-1/2, ನಾರಾಯಣಗಿರಿ ಶೆಡ್ ಹಾಗೂ ಮುಖ್ಯ ಸರತಿ ಸಾಲುಗಳಲ್ಲಿ ಮೂವಿಂಗ್ ಟೇಬಲ್ ವ್ಯವಸ್ಥೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ.ಈ ಮೊದಲು ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದ ಭಕ್ತರು ಪ್ರಸಾದ ಪಡೆಯಲು ಪ್ರತ್ಯೇಕವಾಗಿ ಕೌಂಟರ್‌ಗೆ ತೆರಳಬೇಕಾಗಿತ್ತು. ಇದರಿಂದ ಕೌಂಟರ್‌ಗಳ ಬಳಿ ಜನಸಂದಣಿ ಹೆಚ್ಚಾಗುತ್ತಿತ್ತು. ಆದರೆ ಹೊಸ ವ್ಯವಸ್ಥೆಯಿಂದ ಭಕ್ತರು ಸರತಿ ಸಾಲಿನಿಂದ ಹೊರಬರದೆಯೇ ತಮ್ಮ ಸ್ಥಳದಲ್ಲೇ ಪ್ರಸಾದ ಪಡೆಯಲು ಸಾಧ್ಯವಾಗಲಿದೆ. ಭಕ್ತರ ಸಮಯ ಉಳಿತಾಯ, ಜನಸಂದಣಿ ನಿಯಂತ್ರಣ ಹಾಗೂ ಪ್ರಸಾದ ವಿತರಣೆಯನ್ನು ವೇಗಗೊಳಿಸುವ ನಿಟ್ಟಿನಲ್ಲಿ TTD ಕೈಗೊಂಡಿರುವ ಈ ಹೊಸ ವ್ಯವಸ್ಥೆ ಗಮನ ಸೆಳೆದಿದೆ.