ಹೊಸದಿಲ್ಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬೆನ್ನಲ್ಲೇ ವೈರಲ್ ಆದ ಬಿಜೆಪಿ ಸಂಸದೆ ಪುತ್ರಿ ಪೋಸ್ಟ್!

ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯೊಂದಿಗೆ ವಿದ್ಯಾರ್ಥಿಗಳ ಪ್ರತಿಭಟನೆ ಅಂತ್ಯಗೊಂಡಿದ್ದರೂ, ಪ್ರತಿಭಟನೆಗೆ ಸಂಬಂಧಿಸಿದ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಮುಂದುವರಿದಿವೆ.
ಒಡಿಶಾದ ಬಿಜೆಪಿ ಸಂಸದೆ ಅಪರಾಜಿತಾ ಸಾರಂಗಿ ಅವರ ಪುತ್ರಿ ಅರ್ಚಿತಾ ಸಚಿನ್ ರಾಹರ್ ಅವರು ಪ್ರತಿಭಟನಾಕಾರರನ್ನು ಬೆಂಬಲಿಸಿ ಇನ್ನಾಗ್ರಾಂ ನಲ್ಲಿ ಮಾಡಿದ್ದಾರೆನ್ನಲಾದ ಪೋಸ್ಟ್ ನ ಸ್ಟೀನ್ಶಾಟ್ಗಳು ವೈರಲ್ ಆಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗೆ ಗ್ರಾಸವಾಗಿದೆ.

ಈ ಪೋಸ್ಟ್ ಎಕ್ಸ್ (X), ರೆಡ್ಡಿಟ್ ಹಾಗೂ ಇನ್ನಾಗ್ರಾಂನಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೈರಲ್ ಆದ ಪೋಸ್ಟ್ ನಲ್ಲಿ “ನನ್ನ ಕುಟುಂಬ ಧರ್ಮೇಂದ್ರ ಪ್ರಧಾನ್ ಅವರೊಂದಿಗಿದೆ. ಆದರೆ ನಾನು ವಿದ್ಯಾರ್ಥಿಗಳ ಪರವಾಗಿದ್ದೇನೆ” ಎಂದು ಬರೆಯಲಾಗಿದೆ.
ವಿದ್ಯಾರ್ಥಿ ಚಳವಳಿಗೆ ಬಿಜೆಪಿ ನಾಯಕರ ಕುಟುಂಬದಿಂದ ಕೂಡ ಬೆಂಬಲ ವ್ಯಕ್ತವಾಗುತ್ತಿದೆ ಎಂಬುದಕ್ಕೆ ಉದಾಹರಣೆಯಾಗಿ ಅನೇಕ ಬಳಕೆದಾರರು ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಧರ್ಮೇಂದ್ರ ಪ್ರಧಾನ್ ಅವರ ತಂಡದ ಸದಸ್ಯರು ಅಪರಾಜಿತಾ ಸಾರಂಗಿ ಅವರನ್ನು ಸಂಪರ್ಕಿಸಿ, ಆ ಪೋಸ್ಟ್ ಅನ್ನು ತೆಗೆದುಹಾಕುವಂತೆ ಮನವಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಹೇಳಿದ ಬಳಿಕ ಈ ಕುರಿತ ಚರ್ಚೆ ತೀವ್ರಗೊಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹೇಳಿಕೆಗಳ ಪ್ರಕಾರ, ಆ ಪೋಸ್ಟ್ ಅನ್ನು ಅಳಿಸುವ ಬದಲು ಅರ್ಚಿತಾ ಅವರು ತಮ್ಮ ಇನ್ನಾಗ್ರಾಂ ಖಾತೆಯಲ್ಲಿ ಪೋಸ್ಟ್ ತೆಗೆದುಹಾಕುವಂತೆ ಬಂದಿದ್ದ ಮನವಿಯ ವಿವರಗಳನ್ನೇ ಹಂಚಿಕೊಂಡಿದ್ದಾರೆ. ತಮ್ಮ ನಿಲುವನ್ನು ಮತ್ತಷ್ಟು ಸಮರ್ಥಿಸಿಕೊಂಡಿದ್ದಾರೆ.
ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಅರ್ಚಿತಾ ಅವರ ಇನ್ನಾಗ್ರಾಂ ಖಾತೆ ಇದೀಗ ಲಭ್ಯವಿಲ್ಲ. ಆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆಯೇ ಅಳಿಸಲಾಗಿದೆಯೇ ಅಥವಾ ಬೇರೆ ಕಾರಣದಿಂದ ತೆಗೆದುಹಾಕಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.