ನೆರೆಹೊರೆ ಮೊದಲು: ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಇಂಧನ ಪೂರೈಸಿದ ಭಾರತ

ಹೊಸದಿಲ್ಲಿ: ಪಶ್ಚಿಮ ಏಶ್ಯದಲ್ಲಿ ನಡೆಯುತ್ತಿರುವ ಸಂಘರ್ಷದಿಂದಾಗಿ ಶ್ರೀಲಂಕಾದಲ್ಲಿ ಇಂಧನ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದ್ದು, ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ಸ್ಪಂದಿಸಿರುವ ಭಾರತವು ಶ್ರೀಲಂಕಾಕ್ಕೆ 38,000 ಮೆಟ್ರಿಕ್ ಟನ್ ಪೆಟ್ರೋಲಿಯಂ ರವಾನಿಸಿದೆ.
ಪ್ರಧಾನಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾದ ಅಧ್ಯಕ್ಷ ಅನುರ ಕುಮಾರ ದಿಸನಾಯಕ ನಡುವಿನ ಮಾತುಕತೆಯ ಬಳಿಕ ಈ ಬೆಳವಣಿಗೆ ನಡೆದಿದೆ.
ಈ ಪೆಟ್ರೋಲಿಯಂ ಸಾಗಣೆಯಲ್ಲಿ 20,000 ಮೆಟ್ರಿಕ್ ಟನ್ ಡೀಸೆಲ್ ಹಾಗೂ 18,000 ಮೆಟ್ರಿಕ್ ಟನ್ ಪೆಟ್ರೋಲ್ ಸೇರಿದ್ದು, ಮಾರ್ಚ್ 28ರಂದು ಶ್ರೀಲಂಕಾದ ಕರಾವಳಿಯನ್ನು ತಲುಪಿದೆ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್ ತಿಳಿಸಿದೆ.
2026ರ ಮಾರ್ಚ್ 26ರಂದು ಮೋದಿ ಹಾಗೂ ದಿಸನಾಯಕ ಅವರ ನಡುವೆ ದೂರವಾಣಿ ಮೂಲಕ ಮಾತುಕತೆ ನಡೆದ ಬಳಿಕ ಈ ಪೆಟ್ರೋಲಿಯಂ ಸಾಗಣೆ ಮಾಡಲಾಗಿದೆ ಎಂದು ಹೈಕಮಿಷನ್ ಹೇಳಿದೆ.
