ನಗೋಯಾ: ಏಷ್ಯನ್ ಗೇಮ್ಸ್ 10,000 ಮೀಟರ್ ಓಟದಲ್ಲಿ ಭಾರತದ ಸೀಮಾ ಕುಮಾರಿಗೆ ಕಂಚು – 16 ವರ್ಷಗಳ ಪದಕದ ಬರ ನೀಗಿಸಿದ ಅಥ್ಲೀಟ್!

ನಗೋಯ: ಏಷ್ಯನ್ ಗೇಮ್ಸ್‌ನಲ್ಲಿ ಗುರುವಾರ ಮಹಿಳೆಯರ 10,000 ಮೀಟರ್ ಓಟದ ಫೈನಲ್‌ನಲ್ಲಿ ಭಾರತದ ಸೀಮಾ ಕುಮಾರಿ ಕಂಚಿನ ಪದಕ ಗೆದ್ದಿದ್ದಾರೆ. ಇದರೊಂದಿಗೆ, ಈ ಸ್ಪರ್ಧೆಯಲ್ಲಿ ದೇಶದ 16 ವರ್ಷಗಳ ಪದಕದ ಬರವನ್ನು ಅವರು ಕೊನೆಗೊಳಿಸಿದ್ದಾರೆ.
ಮಿಜುಹೋ ಪಾರ್ಕ್ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಸೀಮಾ 32 ನಿಮಿಷ 50.05 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ಪಡೆದರು. ಬಹರೈನ್‌ನ ವಿನೈಡ್ ಯಾವಿ 32:39.18 ಹೊತ್ತುಗಾರಿಕೆಯೊಂದಿಗೆ ಓಟ ಪೂರ್ಣಗೊಳಿಸಿ ಚಿನ್ನದ ಪದಕ ಗೆದ್ದರೆ, ಜಪಾನ್ನ ನೊಜೊಮಿ ತನಕಾ 32:4154 ಹೊತ್ತುಗಾರಿಕೆಯೊಂದಿಗೆ ಬೆಳ್ಳಿ ಪದಕ ಪಡೆದರು.
ಭಾರತದ ದೂರದ ಓಟಗಾರ್ತಿ ಉತ್ತಮ ಆರಂಭವನ್ನು ಪಡೆದು, ಮೊದಲ 2,000 ಮೀಟರ್‌ವರೆಗೆ ಮುಂಚೂಣಿಯಲ್ಲಿದ್ದರು. ಅವರು ಮೊದಲ 1,000 ಮೀಟರ್ ದೂರವನ್ನು 3:18.12ರಲ್ಲಿ ಕ್ರಮಿಸಿದರೆ, 2,000 ಮೀಟರ್ ಅಂತರವನ್ನು 6:36.13 ಹೊತ್ತುಗಾರಿಕೆಯೊಂದಿಗೆ ಕ್ರಮಿಸಿದರು.
ಸ್ಪರ್ಧೆಯ ವೇಗ ಹೆಚ್ಚುತ್ತಿದ್ದಂತೆ ಸೀಮಾ ನಾಲ್ಕನೇ ಸ್ಥಾನಕ್ಕೆ ಇಳಿದರೂ, ಮುಂಚೂಣಿಯಲ್ಲಿದ್ದ ಓಟಗಾರರ ಬೆನ್ನಿಗೇ ಇದ್ದರು. ಅಂತಿಮ 1,000 ಮೀಟರ್ ಬಾಕಿ ಇರುವಾಗ ಅವರು ಮತ್ತೆ ಮೂರನೇ ಸ್ಥಾನಕ್ಕೆ ಮರಳಿ, ಅಂತಿಮ ಹಂತದವರೆಗೂ ಆ. ಸ್ಥಾನವನ್ನು ಕಾಯ್ದುಕೊಂಡು ಕಂಚಿನ ಪದಕವನ್ನು ಖಚಿತಪಡಿಸಿಕೊಂಡರು.
ಸೀಮಾ, ಚಿನ್ನ ಗೆದ್ದ ಯಾವಿಗಿಂತ 10.87 ಸೆಕೆಂಡುಗಳ ಬಳಿಕ ಗುರಿ ಮುಟ್ಟಿದರು. ಕಝಖ್ಯಾನದ ಡೈಸಿ ಜೆಪೈಮೆ 33:03.21ರಲ್ಲಿ ಗುರಿ ತಲುಪಿ ನಾಲ್ಕನೇ ಸ್ಥಾನ ಪಡೆದರು.
ಈ ಕಂಚಿನ ಪದಕದೊಂದಿಗೆ, ಎಶ್ಯನ್ ಗೇಮ್ಸ್‌ನ 10,000 ಮೀಟರ್ ಸ್ಪರ್ಧೆಯಲ್ಲಿ ಪದಕ ಗೆದ್ದ ಭಾರತದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಗೆ ಸೀಮಾ ಪಾತ್ರರಾಗಿದ್ದಾರೆ. ಈ ಹಿಂದೆ 2010ರ ಏಶ್ಯನ್ ಗೇಮ್ಸ್‌ನಲ್ಲಿ ಫ್ರೀಜಾ ಶ್ರೀಧರನ್ ಚಿನ್ನ ಮತ್ತು ಕವಿತಾ ರಾವತ್ ಬೆಳ್ಳಿ ಗೆದ್ದಿದ್ದರು.
