“ಮಂಗಳೂರು: ಅಂಡರ್ ಆರ್ಮ್ ಕ್ರಿಕೆಟ್‌ನ ‘ಅಂಬಾಸಿಡರ್’ ತಿಲಕ್ ಗುರು ವಿಧಿವಶ!

ಮಂಗಳೂರು: ಕರಾವಳಿಯ ಅತ್ಯಂತ ಜನಪ್ರಿಯ ಕ್ರೀಡೆ ಅಂಡರ್ ಆರ್ಮ್ ಕ್ರಿಕೆಟ್‌ನ ‘ಅಂಬಾಸಿಡರ್’ ಎಂದೇ ಖ್ಯಾತಿ ಗಳಿಸಿದ್ದ, ‘ಮಿತ್ರ ಯಂಗ್ ಫ್ರೆಂಡ್ಸ್ ಉರ್ವ’ ತಂಡದ ಮಾಲೀಕ ತಿಲಕ್ ಗುರು ಅವರು ವಿಧಿವಶರಾಗಿದ್ದಾರೆ. ಅವರ ನಿಧನಕ್ಕೆ ಮಂಗಳೂರಿನ ಕ್ರೀಡಾ ಮತ್ತು ಸಾಂಸ್ಕೃತಿಕ ವಲಯ ತೀವ್ರ ಕಂಬನಿ ಮಿಡಿದಿದೆ.

ತಿಲಕ್ ಗುರು ಅವರು ಕರಾವಳಿಯ ಅಂಡರ್ ಆರ್ಮ್ ಕ್ರಿಕೆಟ್ ಲೋಕಕ್ಕೆ ಹೊಸ ಭಾಷ್ಯ ಬರೆದ ಮಹಾನ್ ಕ್ರೀಡಾ ಪ್ರೇಮಿಯಾಗಿದ್ದರು. ಉರ್ವ ಮೈದಾನದಲ್ಲಿ ನಿರಂತರವಾಗಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟಗಳ ಯಶಸ್ಸಿನ ಹಿಂದೆ ಇವರ ಪರಿಶ್ರಮ ದೊಡ್ಡದಾಗಿತ್ತು. ಪಂದ್ಯಾಟಗಳ ಸಮರ್ಥ ಮೇಲ್ವಿಚಾರಕರಾಗಿ, ಪೋಷಕರಾಗಿ ಹಾಗೂ ತಮ್ಮದೇ ಸ್ವಂತ ತಂಡದ ಯಶಸ್ವಿ ನಾಯಕರಾಗಿ ಅವರು ದಶಕಗಳ ಕಾಲ ಕಾರ್ಯಾಚರಿಸಿದ್ದರು.
ಸ್ಥಳೀಯ ಮಟ್ಟಕ್ಕೆ ಮಾತ್ರ ಸೀಮಿತವಾಗಿದ್ದ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾವಳಿಗಳಿಗೆ ಮೊಟ್ಟಮೊದಲ ಬಾರಿಗೆ ‘ನೇರ ಪ್ರಸಾರ’ದ (Live Streaming) ಹೊಸ ಆಲೋಚನೆಯನ್ನು ತಂದುಕೊಟ್ಟ ಕೀರ್ತಿ ತಿಲಕ್ ಗುರು ಅವರಿಗೆ ಸಲ್ಲುತ್ತದೆ. ಇವರ ಈ ಕ್ರಾಂತಿಕಾರಕ ಯೋಚನೆಯಿಂದಾಗಿ ಅಂಡರ್ ಆರ್ಮ್ ಕ್ರಿಕೆಟ್ ಕರಾವಳಿಯ ಗಡಿ ದಾಟಿ ಜಾಗತಿಕ ಮಟ್ಟದಲ್ಲಿ ಅಪಾರ ಜನಪ್ರಿಯತೆ ಗಳಿಸಲು ಸಾಧ್ಯವಾಗಿತ್ತು.
ಕೇವಲ ಆಟಕ್ಕಷ್ಟೇ ಸೀಮಿತವಾಗದ ತಿಲಕ್ ಗುರು ಅವರು, ಅಂಡರ್ ಆರ್ಮ್ ಕ್ರಿಕೆಟ್ ಆಟಗಾರರ ಆರ್ಥಿಕ ಭದ್ರತೆಗೂ ಶ್ರಮಿಸಿದ್ದರು. ಸ್ಥಳೀಯ ಆಟಗಾರರಿಗೆ ದಿನಭತ್ಯೆಯ ಆಧಾರದ ಮೇಲೆ ಸೂಕ್ತ ಸಂಭಾವನೆ (Daily Allowance) ದೊರಕಿಸಿಕೊಡುವ ವ್ಯವಸ್ಥೆಗೆ ಮುಂಚೂಣಿಯಲ್ಲಿ ನಿಂತು ನೇತೃತ್ವ ವಹಿಸಿದ್ದರು. ಕ್ರೀಡಾ ಲೋಕದ ಹೊರತಾಗಿಯೂ ಮಂಗಳೂರಿನ ಹಲವು ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳ ಯಶಸ್ವಿ ಸಂಯೋಜಕರಾಗಿ ಹಾಗೂ ಆಯೋಜಕರಾಗಿಯೂ ಅವರು ಸಾರ್ವಜನಿಕ ವಲಯದಲ್ಲಿ ಜನಪ್ರಿಯತೆ ಗಳಿಸಿದ್ದರು.