ಅಪ್ಪಟ ಕನ್ನಡಿಗನಂತೆ ಹಾಡಿ ಫಿದಾ ಮಾಡಿದ ಮಲಯಾಳಂ ಸೂಪರ್ ಸ್ಟಾರ್: ವಿಡಿಯೋ ವೈರಲ್

ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ಲಾಲ್ (Mohanlal) ಅವರಿಗೆ ಕನ್ನಡ ಸಿನಿಮಾಗಳ ಬಗ್ಗೆ ಒಲವು ಇದೆ. ಅದರಲ್ಲೂ ಡಾ. ರಾಜ್ಕುಮಾರ್ (Dr Rajkumar) ಸಿನಿಮಾಗಳ ಬಗ್ಗೆ ವಿಶೇಷ ಪ್ರೀತಿ ಇದೆ. ಕನ್ನಡದ ಹಾಡುಗಳನ್ನು ಕೇಳಿ ಅವರು ಎಂಜಾಯ್ ಮಾಡುತ್ತಾರೆ. ಈ ಮೊದಲು ಅವರು ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ..’ (Endendu Ninnanu Maretu) ಹಾಡನ್ನು ನೋಡುತ್ತಾ ಆನಂದಿಸಿದ ವಿಡಿಯೋ ವೈರಲ್ ಆಗಿತ್ತು. ಈಗ ಅವರು ಅದೇ ಹಾಡನ್ನು ವೇದಿಕೆಯಲ್ಲಿ ಹಾಡಿರುವುದು ಗಮನ ಸೆಳೆದಿದೆ. ಈ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋಹನ್ಲಾಲ್ ಅವರು ಭಾಗಿ ಆಗಿದ್ದಾರೆ. ವೇದಿಕೆಯಲ್ಲಿ ಅವರು ಲೈವ್ ಆಗಿ ಹಾಡು ಹೇಳಿದ್ದಾರೆ. ಡಾ. ರಾಜ್ಕುಮಾರ್, ಮಂಜುಳಾ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು ಬದುಕಿರಲಾರೆ’ ಗೀತೆಯನ್ನು ಅವರು ಹಾಡಿದ್ದಾರೆ. ಅಪ್ಪಟ ಕನ್ನಡಿಗನ ರೀತಿ ಅವರು ಹಾಡು ಹೇಳಿದ್ದಾರೆ.
ಏಪ್ರಿಲ್ 24ರಂದು ಡಾ. ರಾಜ್ಕುಮಾರ್ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿಯೇ ಮೋಹನ್ಲಾಲ್ ಅವರ ಈ ವಿಡಿಯೋ ವೈರಲ್ ಆಗಿರುವುದು ವಿಶೇಷ. ಅಣ್ಣಾವ್ರ ಬಗ್ಗೆ ಮೋಹನ್ಲಾಲ್ ಅವರಿಗೂ ಎಷ್ಟು ಅಭಿಮಾನ ಇದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ನಿಜಕ್ಕೂ ಅಚ್ಚರಿ ಆಯಿತು’ ಎಂದು ಅನೇಕರು ಹೇಳಿದ್ದಾರೆ.ರಾಜನ್-ನಾಗೇಂದ್ರ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ‘ಎಂದೆಂದೂ ನಿನ್ನನು ಮರೆತು..’ ಹಾಡು ಇಂದಿಗೂ ಎವರ್ಗ್ರೀನ್ ಆಗಿ ಉಳಿದುಕೊಂಡಿದೆ. ಪಿ.ಬಿ. ಶ್ರೀನಿವಾಸ್ ಮತ್ತು ವಾಣಿ ಜಯರಾಮ್ ಅವರು ಈ ಗೀತೆಗೆ ಧ್ವನಿ ನೀಡಿದ್ದರು. 1974ರಲ್ಲಿ ‘ಎರಡು ಕನಸು’ ಸಿನಿಮಾ ಬಿಡುಗಡೆ ಆಗಿತ್ತು. 50 ವರ್ಷ ಕಳೆದರೂ ಈ ಹಾಡು ಹಳೆಯದಾಗಿಲ್ಲ.ವಿಶೇಷವಾಗಿ ಮೋಹನ್ಲಾಲ್ ಅವರಿಗೆ ‘ಎಂದೆಂದೂ ನಿನ್ನನು ಮರೆತು..’ ಹಾಡು ಬಹಳ ಇಷ್ಟ. ಈ ಮೊದಲು ಕೂಡ ಅವರ ವಿಡಿಯೋ ವೈರಲ್ ಆಗಿತ್ತು. ಈ ಗೀತೆಯನ್ನು ನೋಡುತ್ತಾ ಅವರು ಎಂಜಾಯ್ ಮಾಡಿದ್ದನ್ನು ಕಂಡು ಡಾ. ರಾಜ್ಕುಮಾರ್ ಅಭಿಮಾನಿಗಳು ಸಂತಸಪಟ್ಟಿದ್ದರು. ಈ ಬಾರಿಯಂತೂ ಅವರು ಸಾಹಿತ್ಯವನ್ನು ನೋಡದೆಯೇ ಪಕ್ಕಾ ಕನ್ನಡಿಗನಂತೆ ಹಾಡಿದ್ದಾರೆ. ಅವರ ಕಂಠದಲ್ಲಿ ಈ ಗೀತೆಯನ್ನು ಕೇಳಿ ಅಭಿಮಾನಿಗಳು ಫಿದಾ ಆಗಿದ್ದಾರೆ.
