ಮಹಾರಾಷ್ಟ್ರ: ಗಡ್ಚಿರೋಲಿ ವಸತಿ ಶಾಲೆಯಲ್ಲಿ ಹಾವು ಕಚ್ಚಿ ಮೂವರು ಬುಡಕಟ್ಟು ಬಾಲಕಿಯರು ಸಾ*ವು!

ಗಡ್ಚಿರೋಲಿ: ವಸತಿ ಶಾಲೆಯೊಂದರಲ್ಲಿ ವಿಷದ ಹಾವು ಕಚ್ಚಿ ಮೂವರು ಬುಡಕಟ್ಟು ಬಾಲಕಿಯರು ಮೃತಪಟ್ಟು, ಮೂವರು ಬಾಲಕಿಯರು ಚಿಕಿತ್ಸೆ ಪಡೆಯುತ್ತಿರುವ ಘಟನೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ನಡೆದಿದೆ.

ಭಾನುವಾರ ಮಧ್ಯರಾತ್ರಿ ಅನುದಾನಿತ ಬುಡಕಟ್ಟು ವಸತಿ ಶಾಲೆಯ ಹಾಸ್ಟೆಲ್ನಲ್ಲಿ ಈ ಘಟನೆ ನಡೆದಿದೆ. ಶಾಲೆಯ ಹಾಸ್ಟೆಲ್ನಲ್ಲಿ ನೆಲದ ಮೇಲೆ ಮಲಗಿದ್ದ ವೇಳೆ ಬಾಲಕಿಯರಿಗೆ ವಿಷದ ಹಾವು ಕಚ್ಚಿದೆ. ಹಾವು ಕಡಿತಕ್ಕೆ ಒಳಗಾದವರ ಪೈಕಿ 8, 12 ಮತ್ತು 14 ವರ್ಷದ ಮೂವರು ಬಾಲಕಿಯರು ಸಾವನ್ನಪ್ಪಿದ್ದಾರೆ. 11ರಿಂದ 14 ವರ್ಷದೊಳಗಿನ ಮೂವರು ಬಾಲಕಿಯರು ಹಾವು ಕಡಿತದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಬೆನ್ನಲ್ಲೇ ಜಿಲ್ಲಾ ಆಡಳಿತ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.”ಘಟನೆ ಹೇಗೆ ಸಂಭವಿಸಿತು, ವಿದ್ಯಾರ್ಥಿನಿಯರು ವಾಸಿಸುತ್ತಿದ್ದ ಸ್ಥಳದಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತೇ ಹಾಗೂ ಶಾಲಾ ಆಡಳಿತವು ನಿಗದಿತ ಸುರಕ್ಷತಾ ನಿಯಮಗಳು ಮತ್ತು ಮುನ್ನೆಚ್ಚರಿಕೆಗಳನ್ನು ಪಾಲಿಸಿತ್ತೇ ಎಂಬುದನ್ನು ತಿಳಿಯಲು ಸಮಗ್ರ ತನಿಖೆ ನಡೆಸಲಾಗುವುದು. ಶಾಲೆಯಲ್ಲಿನ ಸುರಕ್ಷತಾ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.”ಹಾವು ಕಡಿತಕ್ಕೆ ಒಳಗಾದ ಮೂವರು ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ಮುಂದುವರಿದಿದೆ. ಅವರಿಗೆ ತಕ್ಷಣವೇ ಹಾವು ವಿಷ ನಿರೋಧಕ ಔಷಧಿ ನೀಡಲಾಗಿದ್ದು, ವೈದ್ಯಕೀಯ ತಂಡಗಳು ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿವೆ” ಎಂದಿದ್ದಾರೆ.