Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮದ್ದೂರು: ರೈಲಿನಲ್ಲಿ ಸೀಟಿಗಾಗಿ ಶುರುವಾದ ಜಗಳ ಚಾಕು ಇರಿತದಲ್ಲಿ ಅಂತ್ಯ; ಗಲಾಟೆ ಬಿಡಿಸಲು ಹೋದ ಪ್ರಯಾಣಿಕನಿಗೆ ಗಂಭೀರ ಗಾಯ

Spread the love

ಮಂಡ್ಯ: ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಓಡಾಡುವ ಪ್ರಯಾಣಿಕರು ಬೆಚ್ಚಿಬೀಳುವಂತಹ ಘಟನೆಯೊಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಂಭವಿಸಿದೆ. ರೈಲಿನಲ್ಲಿ ಕೇವಲ ಒಂದು ಸೀಟಿಗಾಗಿ ಶುರುವಾದ ಸಣ್ಣ ಗಲಾಟೆ, ಕೊನೆಗೆ ಚಾಕು ಇರಿತದಂತಹ ಭೀಕರ ಘಟನೆ ಮೂಲಕ ಅಂತ್ಯಗೊಂಡಿದೆ. ಸಾರ್ವಜನಿಕರ ಸಮಯಪ್ರಜ್ಞೆಯಿಂದಾಗಿ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.

ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ‘ರಾಜ-ರಾಣಿ’ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಈ ಘಟನೆ ನಡೆದಿದೆ. ಆರೋಪಿಗಳಾದ ಸುಭಾನ್ ಖುರೇಷಿ, ಶೋಯಬ್ ಮತ್ತು ವಾಸಿಮ್ ಎಂಬುವವರು ತಮ್ಮ ಕುಟುಂಬದೊಂದಿಗೆ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ರೈಲು ಮದ್ದೂರು ಸಮೀಪಿಸುತ್ತಿದ್ದಂತೆ ಸೀಟಿನ ವಿಚಾರವಾಗಿ ಆರೋಪಿಗಳು ಮತ್ತು ಇತರ ಪ್ರಯಾಣಿಕರ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಜಗಳ ತಾರಕಕ್ಕೇರಿ ರೈಲಿನಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.

ಈ ವೇಳೆ ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ತುಮಕೂರು ಮೂಲದ ಶಿವಕುಮಾರ್ ಎಂಬುವವರು, ‘ಇಲ್ಲಿ ಕುಟುಂಬದವರು ಕುಳಿತಿದ್ದಾರೆ, ಗಲಾಟೆ ಮಾಡಬೇಡಿ’ ಎಂದು ಜಗಳ ಬಿಡಿಸಲು ಮಧ್ಯಪ್ರವೇಶಿಸಿದ್ದಾರೆ. ಆದರೆ, ಶಿವಕುಮಾರ್ ಮಾತಿನಿಂದ ಕೆರಳಿದ ಆರೋಪಿಗಳು ಅವರ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ. ಮೊದಲು ಸುಭಾನ್ ಖುರೇಷಿ ಎಂಬಾತ ತನ್ನ ಬಳಿಯಿದ್ದ ಚಾಕುವಿನಿಂದ ಶಿವಕುಮಾರ್‌ಗೆ ಇರಿದಿದ್ದಾನೆ. ಬಳಿಕ ಮತ್ತೊಬ್ಬ ಆರೋಪಿ ಶೋಯಬ್ ಕೂಡ ಅದೇ ಚಾಕುವಿನಿಂದ ಶಿವಕುಮಾರ್‌ಗೆ ಎರಡನೇ ಬಾರಿ ಇರಿದು ಗಾಯಗೊಳಿಸಿದ್ದಾನೆ.

ಪ್ರಾಣಭಯದಿಂದ ತತ್ತರಿಸಿದ ಶಿವಕುಮಾರ್, ಕೂಡಲೇ ರೈಲಿನಲ್ಲಿನ ತುರ್ತು ಸರಪಳಿ ಎಳೆದು ರೈಲನ್ನು ಮದ್ದೂರು ನಿಲ್ದಾಣದ ಸಮೀಪ ನಿಲ್ಲಿಸಿದ್ದಾರೆ. ರೈಲು ನಿಲ್ಲುತ್ತಿದ್ದಂತೆ ಆರೋಪಿಗಳು ರೈಲಿನಿಂದ ಜಿಗಿದು ಪರಾರಿಯಾಗಲು ಯತ್ನಿಸಿದ್ದಾರೆ. ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ರೈಲ್ವೆ ಗೇಟ್ ಕೀಪರ್ ಕುಮಾರ್ ಆರೋಪಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ ಆರೋಪಿಗಳು ಕುಮಾರ್ ಅವರ ಮೇಲೂ ಚಾಕುವಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.

ಆರೋಪಿಗಳ ಈ ಪುಂಡಾಟಿಕೆಯನ್ನು ಕಂಡು ಕೆರಳಿದ ಸ್ಥಳೀಯರು ಮತ್ತು ರೈಲಿನಲ್ಲಿದ್ದ ಪ್ರಯಾಣಿಕರು ಕೂಡಲೇ ಅವರನ್ನು ಸುತ್ತುವರಿದರು. ಪರಾರಿಯಾಗಲು ಯತ್ನಿಸುತ್ತಿದ್ದ ಸುಭಾನ್ ಖುರೇಷಿ, ಶೋಯಬ್ ಮತ್ತು ವಾಸಿಮ್ ಅವರನ್ನು ಹಿಡಿದ ಸಾರ್ವಜನಿಕರು ಮನಬಂದಂತೆ ‘ಧರ್ಮದೇಟು’ ನೀಡಿ ಸರಿಯಾದ ಪಾಠ ಕಲಿಸಿದ್ದಾರೆ. ನಂತರ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.

ಚಾಕು ಇರಿತದಿಂದ ತೀವ್ರವಾಗಿ ಗಾಯಗೊಂಡಿರುವ ಶಿವಕುಮಾರ್ ಮತ್ತು ಗೇಟ್ ಕೀಪರ್ ಕುಮಾರ್ ಅವರನ್ನು ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ರೈಲ್ವೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೊಮ್ಮೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *