ಕುಕನೂರು: ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಕಾಣಿಕೆ ಹುಂಡಿ ಕಳವು.

ಕುಕನೂರು : ಪಟ್ಟಣದ ವಾರ್ಡ್ 7ರ ಕೋಳಿಪೇಟೆಯ ಗ್ರಾಮದೇವತೆ ದುರ್ಗಾದೇವಿ ದೇವಸ್ಥಾನದ ಕಾಣಿಕೆ ಹುಂಡಿಯನ್ನು ಕಳ್ಳತನ ಮಾಡಿರುವ ಘಟನೆ ಸೆ. 28ರ ರಾತ್ರಿ ನಡೆದಿದೆ.
ದೇವಸ್ಥಾನದ ಪೂಜಾರಿ ಲಿಂಗರಾಜ ಕೋನಾರಿ ಅವರು ಸೆ. 29ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಪೂಜೆಗೆ ತೆರಳಿದಾಗ ಕಾಣಿಕೆ ಹುಂಡಿ ಕಾಣಿಸದಿರುವುದನ್ನು ಗಮನಿಸಿದ್ದಾರೆ. ಕೂಡಲೇ ದೇವಸ್ಥಾನ ಸಮಿತಿ ಅಧ್ಯಕ್ಷ ರುದ್ರಪ್ಪ ಕರೀಗಾರ ಅವರಿಗೆ ಮಾಹಿತಿ ನೀಡಿದ್ದು, ಬಳಿಕ ಸಮಿತಿ ಸದಸ್ಯರೊಂದಿಗೆ ದೇವಸ್ಥಾನಕ್ಕೆ ತೆರಳಿ ಪರಿಶೀಲಿಸಿದಾಗ ಹುಂಡಿ ಕಳವಾಗಿರುವುದು ಗೊತ್ತಾಗಿದೆ.
ನಂತರ ದೇವಸ್ಥಾನದ ಸುತ್ತಮುತ್ತ ಹುಡುಕಾಟ ನಡೆಸಿದಾಗ ಗೊರ್ಲೆಕೊಪ್ಪ ರಸ್ತೆಯಲ್ಲಿರುವ ಹಾಳು ಹನುಮಪ್ಪ ದೇವಸ್ಥಾನದ ಸಮೀಪದ ಚರಂಡಿಯಲ್ಲಿ ಕಾಣಿಕೆ ಹುಂಡಿ ಪತ್ತೆಯಾಗಿದೆ. ಹುಂಡಿಯ ಬೀಗ ಮುರಿದಿದ್ದು, ಅದರಲ್ಲಿದ್ದ ಅಂದಾಜು 1 ಲಕ್ಷ ರೂ. ನಿಂದ 2 ಲಕ್ಷ ರೂ. ಮೌಲ್ಯದ ನೋಟುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸುಮಾರು 100 ರೂ. ರಿಂದ 200 ರೂ. ಮೌಲ್ಯದ ನಾಣ್ಯಗಳನ್ನು ಹುಂಡಿಯಲ್ಲೇ ಬಿಟ್ಟು ಹೋಗಲಾಗಿದೆ.
ಸೆ. 28ರ ರಾತ್ರಿ 11.30ರಿಂದ ಸೆ. 29ರ ಬೆಳಿಗ್ಗೆ 6 ಗಂಟೆಯೊಳಗಿನ ಅವಧಿಯಲ್ಲಿ ಕಳ್ಳತನ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಕುರಿತು ಕುಕನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಕಳ್ಳರನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸುವಂತೆ ಹಾಗೂ ಕಳುವಾದ ಹಣವನ್ನು ವಾಪಸ್ ಕೊಡಿಸುವಂತೆ ದೇವಸ್ಥಾನ ಸಮಿತಿ ಒತ್ತಾಯಿಸಿದೆ.
