ಕೋಲ್ಕತಾ: ನಂದಿಗ್ರಾಮ ಬಿಜೆಪಿ ಅಭ್ಯರ್ಥಿ ನಾಮಪತ್ರದಲ್ಲಿ ವಯಸ್ಸು ಹಾಗೂ ವಿದ್ಯಾರ್ಹತೆ ವ್ಯತ್ಯಾಸ – ಹೈಕೋರ್ಟ್ ಮೆಟ್ಟಿಲೇರಿದ ಕಾಂಗ್ರೆಸ್

ಕೋಲ್ಕತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಹಸಿರಾಣಿ ರಥ್ ಅವರ ಚುನಾವಣಾ ನಾಮಪತ್ರದಲ್ಲಿ ವಯಸ್ಸು ಮತ್ತು ವಿದ್ಯಾರ್ಹತೆ ನಡುವೆ ವ್ಯತ್ಯಾಸವಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಲ್ಕತ್ತಾ ಉಚ್ಚನ್ಯಾಯಾಲಯದ ಮೆಟ್ಟಿಲೇರಿದೆ.
ರಥ್ ತನ್ನ ಅಫಿಡವಿಟ್‌ನಲ್ಲಿ ಜನ್ಮದಿನಾಕವನ್ನು ಉಲ್ಲೇಖಿಸಿಲ್ಲ. ಆದರೆ ತನ್ನ ವಯಸ್ಸನ್ನು ’60+ ವರ್ಷಗಳು’ ಎಂದು ನಮೂದಿಸಿರುವ ಅವರು, 1965ರಲ್ಲಿ 10ನೇ ತರಗತಿ ಪಾಸಾಗಿದ್ದಾಗಿ ತಿಳಿಸಿದ್ದಾರೆ.
ಅವರ ವಯಸ್ಸು ಈಗ 60-65 ವರ್ಷಗಳಾಗಿದ್ದರೆ, 1965ರಲ್ಲಿ 10ನೇ ತರಗತಿ ಪಾಸಾದಾಗ ಅವರಿಗೆ ಕೇವಲ 4ರಿಂದ 9 ವರ್ಷ ವಯಸ್ಸಾಗಿರಬೇಕು ಎಂದು ಕಾಂಗ್ರೆಸ್ ವಾದಿಸಿದೆ.
ಈ ಅಸಂಗತತೆಯ ಬಗ್ಗೆ ಚುನಾವಣಾ ಆಯೋಗಕ್ಕೆ ತಿಳಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಮಾಹಿತಿ ತಪ್ಪಾಗಿದ್ದರೆ ರಥ್ ಅವರ ಉಮೇದುವಾರಿಕೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಕೋರಿದೆ. ಆದರೆ, ಅವರು 1965ರಲ್ಲಿ ಅಲ್ಲ 1980ರಲ್ಲಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದರು ಎಂದು ಬಿಜೆಪಿ ಸಮಜಾಯಿಷಿ ನೀಡಿದೆ.
ನಂದಿಗ್ರಾಮ ಉಪಚುನಾವಣೆ ಅಕ್ಟೋಬರ್ 6 ರಂದು ನಡೆಯಲಿದೆ.
