ಕಿನ್ನಿಗೋಳಿ: ಬೇಕರಿ ಕಾರ್ಮಿಕನ ದುರಂತ ಅಂತ್ಯ; ಬಾವಿಗೆ ಹಾರಿ ಆತ್ಮಹ*ತ್ಯೆ!

ಕಿನ್ನಿಗೋಳಿ : ಬೇಕರಿಯೊಂದರಲ್ಲಿ ಕಳೆದ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸೋಮವಾರ (ಜೂನ್ 29) ಬೆಳಕಿಗೆ ಬಂದಿದೆ. ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ಮೂಲದ ರಮೇಶ್ ಪೂಜಾರಿ (40) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇವರು ಕಿನ್ನಿಗೋಳಿಯ ಬೇಕರಿಗೆ ಸಂಬಂಧಿಸಿದ ಕೊಠಡಿಯಲ್ಲೇ ವಾಸವಾಗಿದ್ದುಕೊಂಡು ದಶಕಗಳ ಕಾಲ ದುಡಿಯುತ್ತಿದ್ದರು ಎನ್ನಲಾಗಿದೆ.

ಸೋಮವಾರ ಬೆಳಿಗ್ಗೆ ರಮೇಶ್ ಪೂಜಾರಿ ಅವರು ಎಂದಿನಂತೆ ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಆತಂಕಗೊಂಡ ಸಹೋದ್ಯೋಗಿಗಳು ಮತ್ತು ಬೇಕರಿ ಸಿಬ್ಬಂದಿ ಅವರ ಕೊಠಡಿ ಹಾಗೂ ಆಸುಪಾಸಿನ ಜಾಗದಲ್ಲಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಬೇಕರಿ ಆವರಣದ ಬಾವಿಯ ಸಮೀಪ ರಮೇಶ್ ಅವರ ಪಾದರಕ್ಷೆಗಳು ಪತ್ತೆಯಾಗಿವೆ. ಇದರಿಂದ ತೀವ್ರ ಅನುಮಾನಗೊಂಡು ಬಾವಿಯ ಒಳಗೆ ಇಣುಕಿ ಪರಿಶೀಲಿಸಿದಾಗ ರಮೇಶ್ ಪೂಜಾರಿ ಅವರ ಮೃತದೇಹ ತೇಲುತ್ತಿರುವುದು ಕಂಡುಬಂದಿದೆ.
ತಕ್ಷಣವೇ ಸ್ಥಳೀಯರು ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ. ಕಳೆದ 18 ವರ್ಷಗಳಿಂದ ಒಂದೇ ಬೇಕರಿಯಲ್ಲಿ ನಂಬಿಕಸ್ಥ ಕಾರ್ಮಿಕನಾಗಿ ದುಡಿಯುತ್ತಿದ್ದ ರಮೇಶ್ ಅವರ ಈ ದಿಢೀರ್ ಆತ್ಮಹತ್ಯೆಗೆ ನಿಖರ ಕಾರಣ ಏನೆಂಬುದು ಇನ್ನು ತಿಳಿದುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮರಣೋತ್ತರ ಪರೀಕ್ಷೆ ಹಾಗೂ ಮುಂದಿನ ಕಾನೂನು ತನಿಖೆ ಕೈಗೊಂಡಿದ್ದಾರೆ.