ಕಾಸರಗೋಡು: ಓಣಂ ಆಚರಣೆ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ 10ನೇ ತರಗತಿ ವಿದ್ಯಾರ್ಥಿ ಸಾ*ವು!

ಕಾಸರಗೋಡು: ಓಣಂ ಆಚರಣೆಯ ವೇಳೆ ಆಕಸ್ಮಿಕವಾಗಿ ತೆರೆದ ಬಾವಿಗೆ ಬಿದ್ದು ಗಂಭೀರ ಗಾಯಗೊಂಡಿದ್ದ 15 ವರ್ಷದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ (ಆಗಸ್ಟ್ 28) ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಕಾಸರಗೋಡಿನ ಚೀಮೇನಿ ಗ್ರಾಮದ ಆನಿಕ್ಕಾಡಿ ನಿವಾಸಿ ಸನೂಪ್ (15) ಮೃತಪಟ್ಟ ದುರ್ದೈವಿ. ಈತ ಚೆರುವತ್ತೂರಿನ ತಿಮಿರಿಯ ಮಹಾಕವಿ ಕುಟ್ಟಮಠ ಸ್ಮಾರಕ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದನು.

ಗುರುವಾರ ರಾತ್ರಿ ಸುಮಾರು 8.45ರ ವೇಳೆಗೆ ಸನೂಪ್ ತನ್ನ ಸ್ನೇಹಿತರೊಂದಿಗೆ ಚೀಮೇನಿಯ ಚೆಂಬ್ರಕಾಣಂನಲ್ಲಿ ನಡೆಯುತ್ತಿದ್ದ ಓಣಂ ಕಾರ್ಯಕ್ರಮಕ್ಕೆ ಆಗಮಿಸಿದ್ದನು. ಈ ವೇಳೆ ಸ್ನೇಹಿತರೊಂದಿಗೆ ಮೂತ್ರವಿಸರ್ಜನೆ ಮಾಡಲು ತೆರಳಿದ್ದಾಗ ಆಕಸ್ಮಿಕವಾಗಿ ಮುಚ್ಚದ ಬಾವಿಗೆ ಬಿದ್ದಿದ್ದಾನೆ. ಬಾಲಕ ಬಾವಿಗೆ ಬೀಳುತ್ತಲೇ ಆತನ ಸ್ನೇಹಿತರು ಕಿರುಚಾಡಿದ್ದು, ತಕ್ಷಣವೇ ಸ್ಥಳೀಯರು ಓಡಿ ಬಂದು ಆತನನ್ನು ಮೇಲಕ್ಕೆತ್ತಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ಸಂದೇಶ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಚೀಮೇನಿ ಅಗ್ನಿಶಾಮಕ ದಳದ ಸಿಬ್ಬಂದಿ ಬಾಲಕನನ್ನು ಬಾವಿಯಿಂದ ಹೊರಗೆಳೆದಿದ್ದಾರೆ. ಆತನ ಸ್ಥಿತಿ ತೀರ ಗಂಭೀರವಾಗಿದ್ದರಿಂದ ಸಿಪಿಆರ್ ನೀಡಿ ತಕ್ಷಣವೇ ಚೆರುವತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಣ್ಣೂರಿನ ಆಸ್ಟರ್ ಮಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾನೆ.