ಕಾನ್ಪುರ ದೇಹತ್: ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ – ಇಬ್ಬರು ಕಾರ್ಮಿಕರು ಸಜೀವ ದಹನ!

ಉತ್ತರ ಪ್ರದೇಶ: ಕಾನ್ಪುರ ದೇಹತ್ ಜಿಲ್ಲೆಯ ಟೈರ್ ಎಣ್ಣೆ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿರುವ ಘಟನೆ ನಡೆದಿದೆ.

ಗಜ್ನರ್ ಪೊಲೀಸ್ ಠಾಣಾ ವ್ಯಾಪ್ತಿಯ ಜರಿಹಾ ಗ್ರಾಮದ ಸಮೀಪದಲ್ಲಿರುವ ಓಂ ಜೆವಿಆರ್ಡಿ ಕಾರ್ಖಾನೆಯಲ್ಲಿ ಸಂಜೆ ಸುಮಾರು 5.30ರ ವೇಳೆಗೆ ಈ ಅವಘಡ ಸಂಭವಿಸಿದೆ. ಕಾರ್ಖಾನೆಯಲ್ಲಿ ಆರು ಮಂದಿ ಕಾರ್ಮಿಕರು ಟ್ಯಾಂಕ್ಗೆ ತಿರಸ್ಕರಿಸಿದ ಟೈರ್ಗಳನ್ನು ತುಂಬುತ್ತಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಇಬ್ಬರು ಕಾರ್ಮಿಕರು ಸುಮಾರು 30 ಅಡಿ ಎತ್ತರದ ಟ್ಯಾಂಕ್ ಮೇಲಿದ್ದರು. ಕ್ಷಣಾರ್ಧದಲ್ಲಿ ಜ್ವಾಲೆಗಳು ವ್ಯಾಪಿಸಿದ ಪರಿಣಾಮ ಅವರು ಬೆಂಕಿಯೊಳಗೆ ಸಿಲುಕಿ ಕೆಳಗೆ ಬಿದ್ದಿದ್ದಾರೆ. ಘಟನೆಯಲ್ಲಿ ಇಬ್ಬರೂ ಸುಟ್ಟು ಮೃತಪಟ್ಟಿದ್ದಾರೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ನಾಲ್ವರು ಕಾರ್ಮಿಕರು ಹಾಗೂ ಟ್ಯಾಂಕ್ನಿಂದ ಹೊರತೆಗೆದ ಎಣ್ಣೆಯನ್ನು ಸಾಗಿಸಲು ಬಂದಿದ್ದ ಟ್ಯಾಂಕರ್ನ ಚಾಲಕ ಅಪಾಯದಿಂದ ಪಾರಾಗಿದ್ದಾರೆ.ಸುಮಾರು ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಈ ಕಾರ್ಖಾನೆಯಲ್ಲಿ ಮುಚ್ಚಿದ ಹಾಗೂ ಆಮ್ಲಜನಕ ರಹಿತ ಕೊಠಡಿಯಲ್ಲಿ ಹೆಚ್ಚಿನ ತಾಪಮಾನ ಬಳಸಿ ತಿರಸ್ಕರಿಸಿದ ಟೈರ್ಗಳನ್ನು ಸಂಸ್ಕರಿಸಿ ಟೈರ್ ಎಣ್ಣೆ ತಯಾರಿಸಲಾಗುತ್ತಿತ್ತು. ಬೆಂಕಿ ಹೊತ್ತಿಕೊಂಡ ಬಳಿಕ ದಟ್ಟ ಕಪ್ಪು ಹೊಗೆ ಆಕಾಶಕ್ಕೆ ಚಿಮ್ಮಿದ್ದು, ಸುಮಾರು ಎರಡು ಕಿಲೋಮೀಟರ್ ದೂರದಿಂದಲೂ ಗೋಚರಿಸಿತ್ತು. ಸಂಜೆ 5.50ರ ಸುಮಾರಿಗೆ ಅಗ್ನಿ ಅವಘಡದ ಮಾಹಿತಿ ಲಭಿಸಿದ ತಕ್ಷಣ ಕಾನ್ಪುರ ದೇಹತ್ ಮುಖ್ಯ ಅಗ್ನಿಶಾಮಕ ಅಧಿಕಾರಿ ಪ್ರತೀಕ್ ಶ್ರೀವಾಸ್ತವ ನೇತೃತ್ವದಲ್ಲಿ ಮತಿ ಅಗ್ನಿಶಾಮಕ ಠಾಣೆಯಿಂದ ಮೂರು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಬಳಿಕ ಮತ್ತಷ್ಟು ಮೂರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ಕರೆಸಲಾಯಿತು.ಘಟನೆ ಕುರಿತು ಮಾತನಾಡಿದ ಪ್ರತೀಕ್ ಶ್ರೀವಾಸ್ತವ, ಎರಡು ತೈಲ ಟ್ಯಾಂಕ್ಗಳ ಪೈಕಿ ಒಂದಕ್ಕೆ ಬೆಂಕಿ ಹೊತ್ತಿಕೊಂಡಿತ್ತು. ಬೆಂಕಿ ಮತ್ತೊಂದು ಟ್ಯಾಂಕ್ಗೆ ಹರಡದಂತೆ ಅದನ್ನು ತಂಪಾಗಿಸುವ ಕಾರ್ಯ ಕೈಗೊಳ್ಳಲಾಯಿತು. ಬೆಂಕಿ ನಂದಿಸಲು ಫೋಮ್ ಬಳಸಲಾಯಿತು ಎಂದು ತಿಳಿಸಿದ್ದಾರೆ. ಸುಮಾರು 40 ನಿಮಿಷಗಳ ಕಾರ್ಯಾಚರಣೆಯ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನ್ಪುರ ದೇಹತ್ ಪೊಲೀಸ್ ವರಿಷ್ಠಾಧಿಕಾರಿ ಶ್ರದ್ಧಾ ನರೇಂದ್ರ ಪಾಂಡೆ, ಹೆಚ್ಚುವರಿ ಎಸ್ಪಿ ಅಲೋಕ್ ಪ್ರಸಾದ್ ಹಾಗೂ ವೃತ್ತಾಧಿಕಾರಿ ಸಂಜಯ್ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಈ ನಡುವೆ, ಕಾರ್ಖಾನೆಯ ಮಾಲೀಕ ರಮೇಶ್ ಚಂದ್ರ ಗುಪ್ತಾ ಪೊಲೀಸರಿಗೆ ನೀಡಿರುವ ಮಾಹಿತಿಯ ಪ್ರಕಾರ, ಈ ಹಿಂದೆ ಕಾರ್ಮಿಕರು ಗೋದಾಮಿನ ಪ್ರದೇಶಕ್ಕೆ ಬೀಡಿ ತೆಗೆದುಕೊಂಡು ಹೋಗುತ್ತಿರುವುದು ಪತ್ತೆಯಾಗಿತ್ತು. ಸೋಮವಾರವೂ ಕೆಲ ಕಾರ್ಮಿಕರು ಬೀಡಿಗಳನ್ನು ಕಾರ್ಖಾನೆಯೊಳಗೆ ತೆಗೆದುಕೊಂಡು ಹೋಗಿದ್ದರು ಎಂದು ಅವರು ಆರೋಪಿಸಿದ್ದಾರೆ. ಇದೇ ಕಾರಣದಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂಬ ಶಂಕೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ಆದರೆ, ಬೆಂಕಿಗೆ ನಿಖರ ಕಾರಣ ಏನು ಎಂಬುದು ಇನ್ನೂ ದೃಢಪಟ್ಟಿಲ್ಲ. ಮಾಲೀಕರ ಆರೋಪ ಸೇರಿದಂತೆ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.