ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗಕ್ಕೆ ಸಜ್ಜಾದ ಕದ್ರಿಯ ಶ್ರೀ ಯೋಗೇಶ್ವರ ಮಠ

ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜೀ ಮಹಾರಾಜ್ ಸೇವಾ ಸಂಸ್ಥಾನ (ರಿ.) ಹಾಗು ದ ಸ್ಯಾಫ್ರನ್ ಫ್ರಂಟ್ ವತಿಯಿಂದ ಸುದ್ಧಿಗೋಷ್ಠಿಯನ್ನು ನಡೆಸಿ, ಮುಂಬರುವ ಮಹಾಯಾಗದ ವಿವರಗಳನ್ನು ಮಾಧ್ಯಮಗಳಿಗೆ ತಿಳಿಸಲಾಯಿತು. ಮಂಗಳೂರಿನ ಕದ್ರಿ ಶ್ರೀ ಯೋಗೇಶ್ವರ ಮಠದಲ್ಲಿ ಆಗಸ್ಟ್ 24 ರಿಂದ 28 ರವರೆಗೆ ಲೋಕಕಲ್ಯಾಣಾರ್ಥವಾಗಿ ಐದು ದಿನಗಳ ಕಾಲ ‘ಶ್ರೀಮದ್ ಲಕ್ಷ್ಮೀನಾರಾಯಣ ಮಹಾಯಾಗ’ವನ್ನು ಹಮ್ಮಿಕೊಳ್ಳಲಾಗಿದ್ದು, ಈ ಧಾರ್ಮಿಕ ಮಹೋತ್ಸವದ ಸಂಪೂರ್ಣ ವಿವರಗಳನ್ನು ಸಾರ್ವಜನಿಕರಿಗೆ ತಲುಪಿಸುವುದು ಈ ಪತ್ರಿಕಾ ಗೋಷ್ಠಿಯ ಮುಖ್ಯ ಉದ್ದೇಶವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಬೃಹತ್ ಮಹಾಯಾಗವು ಆಯೋಜನೆಗೊಂಡಿದ್ದು, ಉತ್ತರ ಪ್ರದೇಶದ ವಾರಣಾಸಿಯ (ವಿಂಧ್ಯಾಚಲ) ಪ್ರಸಿದ್ಧ ಪುರೋಹಿತರಾದ ಆಚಾರ್ಯ ಶ್ರೀ ಲವಕುಶ್ ಮಿಶ್ರಾಜಿ ಅವರ ದಿವ್ಯ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ಹಾಗೂ ಹೋಮ-ಹವನಗಳು ನೆರವೇರಲಿವೆ.

ಮಹಾಯಾಗದ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲು ಆಯೋಜಿಸಲಾಗಿದ್ದ ಈ ಪತ್ರಿಕಾ ಗೋಷ್ಠಿಯಲ್ಲಿ ಸಂಸ್ಥೆಯ ಪ್ರಮುಖರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ದಿನಕರ ಶೆಟ್ಟಿ, ಶ್ರೀ ರಾಘವೇಂದ್ರ ರಾವ್ ಮತ್ತು ಶ್ರೀ ಕಿಶೋರ್ ಕುಮಾರ್ ಜೋಗಿ, ಪ್ರಧಾನ ಸಂಚಾಲಕರಾದ ರಾಜೇಶ್ ಪವಿತ್ರನ್, ಸಹ ಸಂಚಾಲಕರಾದ ಜನಾರ್ಧನ ಅತ್ತಾವರ, ಸಂಘಟನಾ ಕಾರ್ಯದರ್ಶಿಯಾದ ಡಾ. ಎಲ್.ಕೆ. ಸುವರ್ಣ, ಕಾರ್ಯದರ್ಶಿಗಳಾದ ಕಮಲೇಶ್ ಸುವರ್ಣ, ಶ್ರೀ ವರ್ಣಿತ್ ಶೆಟ್ಟಿ, ಹಾಗು ಶ್ರೀ ಉಮೇಶ್ ಶೆಟ್ಟಿ ಹೊಸಲಕ್ಕೆ ಉಪಸ್ಥಿತರಿದ್ದರು.
ಆಗಸ್ಟ್ 24 ರಂದು ಬೆಳಿಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಕದ್ರಿ ಶ್ರೀ ಯೋಗೇಶ್ವರ ಮಠದವರೆಗೆ ಅತ್ಯಂತ ವಿಜೃಂಭಣೆಯಿಂದ ಕಳಶಯಾತ್ರೆ ನಡೆಯಲಿದೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು. ನಂತರದ ದಿನಗಳಲ್ಲಿ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳು, ಮಂತ್ರಪಠಣ ಮತ್ತು ಪೂಜಾ ಕೈಂಕರ್ಯಗಳು ಜರುಗಲಿದ್ದು, ಆಗಸ್ಟ್ 28 ರಂದು ಪೂರ್ಣಾಹುತಿಯೊಂದಿಗೆ ಮಹಾಯಾಗವು ಸಂಪನ್ನಗೊಳ್ಳಲಿದೆ. ಯಾವುದೇ ಜಾತಿ, ಮತ ಅಥವಾ ವರ್ಗದ ಭೇದವಿಲ್ಲದೆ ಎಲ್ಲರೂ ಒಂದಾಗಿ ಈ ಯಜ್ಞದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಸಮಾಜದಲ್ಲಿ ಶಾಂತಿ, ಆರೋಗ್ಯ, ಸೌಹಾರ್ದತೆ ಮತ್ತು ಸಮೃದ್ಧಿ ನೆಲೆಸುವಂತೆ ಮಾಡುವ ಸದುದ್ದೇಶದಿಂದ ಈ ಮಹಾಯಾಗವನ್ನು ಆಯೋಜಿಸಲಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ ಶ್ರೀ ಲಕ್ಷ್ಮೀನಾರಾಯಣರ ಅನುಗ್ರಹ ಹಾಗೂ ಗುರುಗಳ ಆಶೀರ್ವಾದವನ್ನು ಪಡೆದುಕೊಳ್ಳುವಂತೆ ಆಯೋಜಕರು ಈ ಪತ್ರಿಕಾ ಗೋಷ್ಠಿಯ ಮೂಲಕ ವಿಶೇಷ ಮನವಿ ಮಾಡಿಕೊಂಡಿದ್ದಾರೆ.