ಮುಂಬೈ ಇಂಡಿಯನ್ಸ್ಗೆ ವಿದಾಯ ಹೇಳಲಿದ್ದಾರಾ ಹಾರ್ದಿಕ್ ಪಾಂಡ್ಯ?; ಬರೋಬ್ಬರಿ 7 ಫ್ರಾಂಚೈಸಿಗಳ ನಡುವೆ ತೀವ್ರ ಪೈಪೋಟಿ!

ಹೊಸದಿಲ್ಲಿ: 2026ರ ಐಪಿಎಲ್ ಕ್ರೀಡಾಕೂಟದಲ್ಲಿ ಹೀನಾಯ ಪ್ರದರ್ಶನ ತೋರಿ, ಪ್ಲೇ ಆಫ್ ಹಂತದಿಂದ ಹೊರ ಬಿದ್ದಿದ್ದ ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಅದರ ನಾಯಕ ಹಾಗೂ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ತೊರೆಯಲು ನಿರ್ಧರಿಸಿದ ಬಳಿಕ, ಒಟ್ಟು ಏಳು ಪ್ರಾಂಚೈಸಿಗಳನ್ನು ಅವರನ್ನು ತಮ್ಮ ತಂಡಕ್ಕೆ ಖರೀದಿಸಲು ಆಸಕ್ತಿ ತೋರಿವೆ ಎಂದು ವರದಿಯಾಗಿದೆ.
ಹಾರ್ದಿಕ್ ಪಾಂಡ್ಯರನ್ನು ತಮ್ಮ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹಲವು ಫ್ರಾಂಚೈಸಿಗಳು ಉತ್ಸುಕತೆ ತೋರಿದ್ದು, ಹಾರ್ದಿಕ್ ಪಾಂಡ್ಯರನ್ನು ಖರೀದಿಸಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ ಮುಂದಾಗಿದೆ ಎಂದು Timesofindia.com ವರದಿ ಮಾಡಿದೆ.
ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯಲ್ಲದೆ, ಕೋಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಗಳೂ ಅವರನ್ನು ಖರೀದಿಸಲು ಸ್ಪರ್ಧೆಗಿಳಿದಿವೆ ಎನ್ನಲಾಗಿದೆ. ಅದರಲ್ಲೂ ಮಹೇಂದ್ರ ಸಿಂಗ್ ಧೋನಿ ಯುಗದ ಬಳಿಕ, ಹಾರ್ದಿಕ್ ಪಾಂಡ್ಯರನ್ನು ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಅತ್ಯುತ್ಸಾಹ ತೋರುತ್ತಿದೆ ಎಂದು ಹೇಳಲಾಗಿದೆ. ಆದರೆ, ಹಾರ್ದಿಕ್ ಪಾಂಡ್ಯ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಸೇರ್ಪಡೆಯಾಗಲಿದ್ದಾರೆಯೇ ಎಂಬುದರ ಬಗ್ಗೆ ಈವರೆಗೆ ಯಾವುದೇ ಖಾತರಿ ದೊರೆತಿಲ್ಲ ಎನ್ನಲಾಗಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ಕೂಡಾ ಹಾರ್ದಿಕ್ ಪಾಂಡ್ಯಗೆ ನಾಯಕತ್ವ ನೀಡಲು ಆಸಕ್ತಿ ತೋರಿದ್ದು, ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯು ಅವರಿಗೆ ನಾಯಕತ್ವ ಹಾಗೂ ದೀರ್ಘಕಾಲೀನ ಪಾತ್ರ ಎರಡನ್ನೂ ನೀಡಲು ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ.
