ಆಸ್ಪತ್ರೆಯಲ್ಲಿ ರಣರಂಗ; ನರ್ಸಿಂಗ್ ಸಿಬ್ಬಂದಿಯನ್ನು ಹೊರಗೆ ಎಳೆದು ಹಾಡುಹಗಲೇ ಬರ್ಬರ ಹ*ಲ್ಲೆ!

ಝಾನ್ಸಿ: ಇಲ್ಲಿನ ಮಹಾರಾಣಿ ಲಕ್ಷ್ಮಿ ಬಾಯಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆಯು ಶನಿವಾರ ಬೆಳಿಗ್ಗೆ ತೀವ್ರ ಗದ್ದಲಕ್ಕೆ ಕಾರಣವಾಯಿತು. ಚಿಕಿತ್ಸೆಯಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಆರೋಪಿಸಿದ ಮೃತನ ಕುಟುಂಬ ಸದಸ್ಯರು, ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿಯನ್ನು ಕೊಠಡಿಯಿಂದ ಹೊರಗೆ ಎಳೆದು ಹಾಡುಹಗಲೇ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಆಸ್ಪತ್ರೆಯ ಭದ್ರತೆಯ ಬಗ್ಗೆ ಪ್ರಶ್ನೆಗಳು ಮೂಡಿವೆ.
ಪೊಲೀಸರ ಮಾಹಿತಿಯ ಪ್ರಕಾರ, ವಿಷ ಸೇವಿಸಿದ್ದ ಡಾಟಿಯಾ ನಿವಾಸಿ ಅಜಯ್ ಎಂಬ ಯುವಕನನ್ನು ಶುಕ್ರವಾರ ಸಂಜೆ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ, ಶನಿವಾರ ಬೆಳಗಿನ ಜಾವ 4:30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಇದರಿಂದ ಕೆರಳಿದ ಕುಟುಂಬದವರು, ನರ್ಸಿಂಗ್ ಸಿಬ್ಬಂದಿ ದಾಖಲೆಗಳನ್ನು ಪೂರ್ಣಗೊಳಿಸಲು ಮುಂದಾದಾಗ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸೃಷ್ಟಿಸಿದ್ದಾರೆ.
ಈ ಹಲ್ಲೆಯನ್ನು ಖಂಡಿಸಿ ಕಿರಿಯ ವೈದ್ಯರು, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಸಿಬ್ಬಂದಿ ತಕ್ಷಣವೇ ಮುಷ್ಕರ ಘೋಷಿಸಿ ಪ್ರತಿಭಟನೆ ನಡೆಸಿದರು. ಆಸ್ಪತ್ರೆಯಲ್ಲಿ ಭದ್ರತಾ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ವೈದ್ಯಕೀಯ ಸಿಬ್ಬಂದಿಯ ಮೇಲೆ ನಿರಂತರವಾಗಿ ಇಂತಹ ದಾಳಿಗಳು ನಡೆಯುತ್ತಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಹೊರಠಾಣೆ ಉಸ್ತುವಾರಿ ಮೋಹಿತ್ ರಾಣಾ ಮತ್ತು CMS ಕಾರ್ಯದರ್ಶಿ ಮಹೂರ್, ಸಿಬ್ಬಂದಿಯ ಮನವೊಲಿಸಿ ಪ್ರತಿಭಟನೆಯನ್ನು ಶಾಂತಗೊಳಿಸಿದರು. ಸದ್ಯ ಆಸ್ಪತ್ರೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
