ಯೂರೋಪ್ನಲ್ಲಿ ಬಿಸಿಲ ಕಿಚ್ಚು: ತಾಪಮಾನದ ಬೇಗೆಗೆ ಫ್ರಾನ್ಸ್ನಲ್ಲಿ 40 ಮಂದಿ ಸಾ*ವು; ಪ್ರಮುಖ ಪ್ರವಾಸಿ ತಾಣಗಳ ಬಂದ್

ಪ್ಯಾರಿಸ್: ದಾಖಲೆ ತಾಪಮಾನದಿಂದ ಕಂಗೆಟ್ಟಿರುವ ಫ್ರಾನ್ಸ್ನಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ನೀರನ್ನು ಆಶ್ರಯಿಸುವ ಪರಿಸ್ಥಿತಿ ಇದ್ದು ಹೀಗೆ ನೀರಿಗೆ ಇಳಿದಿರುವವರ ಪೈಕಿ 40 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಪ್ರಕಟಿಸಿದ್ದಾರೆ.
ಬ್ರಿಟನ್, ಇಟಲಿ, ಸ್ಪಿಟ್ಟರ್ಲೆಂಡ್ ಮತ್ತು ಸ್ಪೇನ್ನಲ್ಲೂ ತಾಪಮಾನ ಅತ್ಯಧಿಕವಾಗಿದ್ದು, ದಾಖಲೆ ಉಷ್ಣಾಂಶದಿಂದಾಗಿ ಶಾಲೆಗಳನ್ನು ಮುಚ್ಚಲಾಗಿದೆ. ಸಾರಿಗೆ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಐಫೆಲ್ ಟವರ್ ಸೇರಿದಂತೆ ಎಲ್ಲ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ.

ಜಾಗತಿಕ ಸರಾಸರಿ ತಾಪಮಾನದ ದುಪ್ಪಟ್ಟು ಉಷ್ಣಾಂಶದಿಂದಾಗಿ ಯೂರೋಪ್ ಕಂಗೆಟ್ಟಿದೆ ಎಂದು ವಿಶ್ವ ಹವಾಮಾನ ಸಂಸ್ಥೆ ಹೇಳಿದೆ. ಮಂಗಳವಾರ ಫ್ರಾನ್ಸ್ನಲ್ಲಿ ದಾಖಲೆಯ 44.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. 54 ಇಲಾಖೆಗಳಿಗೆ ರೆಡ್ ಅಲರ್ಟ್ ಘೋಷಿಸಿದ್ದು, ಬುಧವಾರ ಈ ಸಂಖ್ಯೆ 58ಕ್ಕೇರಿದೆ.
ಸೆಖೆಯಿಂದ ತಪ್ಪಿಸಿಕೊಳ್ಳಲು ಜನ ನದಿ ಹಾಗೂ ಕಾಲುವೆಗಳಿಗೆ ಧುಮುಕುತ್ತಿದ್ದಾರೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳುವ ಧಾವಂತವನ್ನು ಅರ್ಥಮಾಡಿಕೊಳ್ಳಬಹುದಾಗಿದ್ದರೂ, ಅನಧಿಕೃತ ಹಾಗೂ ಅಪಾಯಕಾರಿ ಪ್ರದೇಶಗಳಲ್ಲಿ ಈಜದಂತೆ ಕ್ರೀಡಾ ಸಚಿವೆ ಮರೀನಾ ಫೆರಾರಿ ಮನವಿ ಮಾಡಿದ್ದಾರೆ.