ಹಾಸನ: ಕೃಷಿ ಕಾಲೇಜು ಹಾಸ್ಟೆಲ್ ಸಾಂಬಾರ್‌ನಲ್ಲಿ ಹಲ್ಲಿ ಪತ್ತೆ; ವಿಷಪೂರಿತ ಆಹಾರ ಸೇವಿಸಿ 15 ವಿದ್ಯಾರ್ಥಿನಿಯರು ಅಸ್ವಸ್ಥ!

ಹಾಸನ: ಹಲ್ಲಿ ಬಿದ್ದ ಸಾಂಬಾರ್‌ನಲ್ಲಿ ಊಟ ಸೇವನೆ ಮಾಡಿದ 15 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಘಟನೆ ಹಾಸನ ತಾಲೂಕಿನ, ಸಾರಾಪುರದಲ್ಲಿರುವ ಕೃಷಿ ವಿಜ್ಞಾನ ಕಾಲೇಜಿನಲ್ಲಿ ನಡೆದಿದೆ.

ಬುಧವಾರ ರಾತ್ರಿ ಊಟ ಮಾಡುವಾಗ ಊಟ ಮಾಡುವಾಗ ಸಾಂಬಾರ್‌ನಲ್ಲಿ ಹಲ್ಲಿ ಇರುವುದು ತಡವಾಗಿ ಬೆಳಕಿಗೆ ಬಂದಿರುವ ಕಾರಣ ಅಷ್ಟರಲ್ಲಾಗಲೇ ಊಟ ಸವಿದಿದ್ದ 15 ವಿದ್ಯಾರ್ಥಿನಿಯರಲ್ಲಿ ತಕ್ಷಣವೇ ವಾಂತಿ ಹಾಗೂ ತಲೆಸುತ್ತು ಕಾಣಿಸಿಕೊಂಡು ಅಸ್ವಸ್ಥರಾಗಿದ್ದಾರೆ. ಇವರ ಪೈಕಿ ತೀವ್ರವಾಗಿ ಅಸ್ವಸ್ಥಗೊಂಡ ಆರು ವಿದ್ಯಾರ್ಥಿನಿಯರನ್ನು ತಕ್ಷಣವೇ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ (HIMS) ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿದೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ಹಿಮ್ಸ್ ಆಸ್ಪತ್ರೆಗೆ ಖುದ್ದಾಗಿ ಭೇಟಿ ನೀಡಿ, ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದ್ದಾರೆ.
ಸುಮಾರು 400 ವಿದ್ಯಾರ್ಥಿನಿಯರಿರುವ ಈ ದೊಡ್ಡ ಹಾಸ್ಟೆಲ್‌ಗೆ ಕಳೆದ ಎರಡು ತಿಂಗಳಿಂದ ಗ್ಯಾಸ್ ಸಿಲಿಂಡರ್ ಸಿಗದೆ ತೀವ್ರ ಪರದಾಟ ಉಂಟಾಗಿದೆ ಎಂದು ವಿದ್ಯಾರ್ಥಿನಿಯರು ಗಂಭೀರ ಆರೋಪ ಮಾಡಿದ್ದಾರೆ. ಹಾಸ್ಟೆಲ್‌ಗೆ ವಾರಕ್ಕೆ ಕನಿಷ್ಠ 4 ರಿಂದ 6 ವಾಣಿಜ್ಯ (Commercial) ಸಿಲಿಂಡರ್‌ಗಳ ಅವಶ್ಯಕತೆಯಿದೆ. ಆದರೆ ಗ್ಯಾಸ್ ಏಜೆನ್ಸಿಯವರು ವಾರಕ್ಕೆ ಕೇವಲ ಒಂದರಿಂದ ಎರಡು ಸಿಲಿಂಡರ್ ಮಾತ್ರ ಪೂರೈಸುತ್ತಿದ್ದಾರೆ ಎನ್ನಲಾಗಿದೆ.
ಸಿಲಿಂಡರ್ ಕೊರತೆಯಿಂದಾಗಿ ಅನಿವಾರ್ಯವಾಗಿ ಅಡುಗೆ ಮನೆಯ ಹೊರಗಡೆ ಸೌದೆ ಒಲೆ ಹಾಕಿ ಅಡುಗೆ ಮಾಡಲಾಗುತ್ತಿತ್ತು. ಹೊರಗಡೆ ತೆರೆದ ಜಾಗದಲ್ಲಿ ಅಡುಗೆ ಮಾಡುತ್ತಿದ್ದರಿಂದ ಹಾಗೂ ಅಡುಗೆ ತಯಾರಿಸುವವರು ಶುಚಿತ್ವ ಕಾಪಾಡದ ಕಾರಣ ಸಾಂಬಾರ್‌ಗೆ ಹಲ್ಲಿ ಬಿದ್ದಿದೆ. ಇದೇ ಅಚಾತುರ್ಯಕ್ಕೆ ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ಮುಖ್ಯ ಕಾರಣ ಎಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 400 ಜನ ವಿದ್ಯಾರ್ಥಿನಿಯರು ಇರುವ ಹಾಸ್ಟೆಲ್‌ನ ಈ ದುಸ್ಥಿತಿಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಗ್ಯಾಸ್ ಏಜೆನ್ಸಿಯ ಬೇಜವಾಬ್ದಾರಿತನವೇ ನೇರ ಕಾರಣ ಎಂದು ಪೋಷಕರು ತೀವ್ರವಾಗಿ ಕಿಡಿಕಾರಿದ್ದಾರೆ.