ಗುಣಾ: ಕರಾಟೆ ತರಬೇತುದಾರರಿಂದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾ*ರ; ಇಬ್ಬರಿಗೆ ಜೀವಾವಧಿ ಶಿಕ್ಷೆ

ಭೋಪಾಲ್: ಅಪ್ರಾಪ್ತ ಬಾಲಕಿ ಮೇಲೆ ಹಲವು ವರ್ಷಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಮಧ್ಯಪ್ರದೇಶದ ಗುಣಾ ಜಿಲ್ಲೆಯ ಇಬ್ಬರು ಕರಾಟೆ ತರಬೇತುದಾರರಿಗೆ ವಿಶೇಷ ಪೋಕ್ಷೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಆರೋಪಿಗಳಾದ ಜಗವೀರ್ ಜಾತವ್ (40) ಮತ್ತು ಸಚಿನ್ ಭಟ್ನಾಗರ್ (30) ಅವರಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 7,000ರೂ.ದಂಡ ವಿಧಿಸಲಾಗಿದೆ. ಪ್ರಕರಣದ ಮೂರನೇ ಆರೋಪಿಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಗುಣಾ ಕಂಟೋನ್ಸೆಂಟ್ ಠಾಣೆ ಪೊಲೀಸರು ಮೂವರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಷೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದರು.
ಬಳಿಕ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.

ವಿಚಾರಣೆ ಪೂರ್ಣಗೊಂಡ ಬಳಿಕ ವಿಶೇಷ ಪೋಕ್ಸ್ ನ್ಯಾಯಾಲಯ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ತೀರ್ಪಿನಲ್ಲಿ, ಅಪ್ರಾಪ್ತ ಬಾಲಕಿಯು ಚಿಕ್ಕ ವಯಸ್ಸಿನಲ್ಲಿಯೇ ಗಂಭೀರ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವುದರಿಂದ ತೀವ್ರ ಮಾನಸಿಕ ಆಘಾತ ಅನುಭವಿಸಿದ್ದು, ಅದರ ಪರಿಣಾಮ ಆಕೆಯ ಇಡೀ ಜೀವನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರಗಳ ಪ್ರಕಾರ, ಗುಣಾ ಸಮೀಪದ ನಿವಾಸಿಯಾದ ಸಂತ್ರಸ್ತೆ 2017ರಲ್ಲಿ 12 ವರ್ಷದವಳಾಗಿದ್ದಾಗ ಕರಾಟೆ ತರಬೇತಿ ಪಡೆಯಲು ‘ಗುಣಾ ಎಂಪಿ ವಾಡೋ ಕೈ ಕರಾಟೆ ಅಸೋಸಿಯೇಷನ್‌ಗೆ ಸೇರಿದ್ದಳು. ಅಲ್ಲಿ ಜಗವೀರ್ ಜಾತ ಮತ್ತು ಸಚಿನ್ ಭಟ್ನಾಗರ್ ತರಬೇತಿ ನೀಡುತ್ತಿದ್ದರು. ತರಬೇತಿಯ ನೆಪದಲ್ಲಿ ಮುಂಬೈ ಮತ್ತು ಮಲೇಷ್ಯಾ ಸೇರಿದಂತೆ ವಿವಿಧ ಸ್ಥಳಗಳಿಗೆ ಕರೆದೊಯ್ದು ಇಬ್ಬರೂ ಪದೇ ಪದೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2019ರವರೆಗೆ ತನ್ನ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ನಡೆಯಿತು. ಕೋವಿಡ್-19 ಸಾಂಕ್ರಾಮಿಕ ಹರಡಿದ ಬಳಿಕವಷ್ಟೇ ಅದು ನಿಂತಿತು ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ. 2021ರಲ್ಲಿ ಆರೋಪಿಗಳು ಮತ್ತೆ ತನ್ನನ್ನು ಸಂಪರ್ಕಿಸಿದಾಗ ನಡೆದ ಘಟನೆಯನ್ನು ತಾಯಿಗೆ ತಿಳಿಸಿದ್ದಳು. ಬಳಿಕ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಾಗಿತ್ತು ಎಂದು ತನಿಖೆಯಿಂದ ತಿಳಿದು ಬಂದಿದೆ.
“ಸಚಿನ್ ಭಟ್ನಾಗರ್ ಮತ್ತು ಜಗವೀರ್ ಜಾತವ್ ಅವರು ಅಪ್ರಾಪ್ತ ಬಾಲಕಿಯ ಅಪಕ್ವ ಮನಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ಆಕೆ ಅವರ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಬಗೆದಿದ್ದಾರೆ. ಗುರು-ಶಿಷ್ಯರ ನಡುವಿನ ಪವಿತ್ರ ಸಂಬಂಧಕ್ಕೂ ಕಳಂಕ ತಂದು, ಸಮಾಜದ ನೈತಿಕ ಮೌಲ್ಯಗಳನ್ನು ಉಲ್ಲಂಘಿಸಿದ್ದಾರೆ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.