ಗೋರಖ್ಪುರ: ರಸ್ತೆ ಕಾಮಗಾರಿ ಸ್ಥಳದಲ್ಲಿ ಘೋರ ದುರಂತ; ಮಣ್ಣಿನ ರಾಶಿಯಡಿ ಸಿಲುಕಿ ಕಾರ್ಮಿಕ ಉಸಿರುಗಟ್ಟಿ ಸಾ*ವು!

ಗೋರಖ್ಪುರ: ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಸ್ಥಳದಲ್ಲಿ ಮಣ್ಣಿನ ರಾಶಿಯಡಿ ಕಾರ್ಮಿಕನೊಬ್ಬನ ಮೃತದೇಹ ಪತ್ತೆಯಾಗಿದೆ. ರಸ್ತೆಯ ಮೇಲೆ ಮಲಗಿದ್ದ ಕಾರ್ಮಿಕನ ಮೇಲೆ ಮಣ್ಣನ್ನು ಸುರಿದಿರುವುದರಿಂದ ಆತ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಗೋರಖ್ಪುರದ ಗುಲಾರಿಯಾ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಚತುಷ್ಪಥ ಹೆದ್ದಾರಿ ಬಳಿ ಈ ಘಟನೆ ನಡೆದಿದೆ. ಮಣ್ಣನ್ನು ಸಮತಟ್ಟು ಮಾಡುತ್ತಿದ್ದ ಕಾರ್ಮಿಕರು ಮಣ್ಣಿನ ರಾಶಿಯಿಂದ ಕೈ ಹೊರಬಂದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ತರಳಿದ ಪೊಲೀಸರು ಮೃತದೇಹವನ್ನು ಮಣ್ಣಿನಡಿಯಿಂದ ಮೇಲಕ್ಕೆತ್ತಿದ್ದಾರೆ. ಮೃತದೇಹದ ಬಳಿ ಚೀಲವೊಂದು ಪತ್ತೆಯಾಗಿದೆ. ಅದರಲ್ಲಿ ಆಹಾರ ಪದಾರ್ಥ, ಮೊಬೈಲ್ ಚಾರ್ಜರ್ ಸೇರಿದಂತೆ ಹಲವು ವಸ್ತುಗಳಿದ್ದವು. ಚೀಲದಲ್ಲಿ ದೊರೆತ ವಸ್ತುಗಳ ಆಧಾರದ ಮೇಲೆ, ಮೃತ ವ್ಯಕ್ತಿ ರಾತ್ರಿ ವೇಳೆ ಅದೇ ಸ್ಥಳದಲ್ಲಿ ತಂಗಿದ್ದಿರಬಹುದು ಎಂದು ತನಿಖಾಧಿಕಾರಿಗಳು ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.
ತಡರಾತ್ರಿವರೆಗೂ ಮಣ್ಣು ಸಾಗಿಸುತ್ತಿದ್ದ ಲಾರಿಗಳು ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದವು. ಡಿವೈಡರ್ ಮೇಲೆ ವ್ಯಕ್ತಿಯೊಬ್ಬ ಮಲಗಿರುವುದು ಗಮನಕ್ಕೆ ಬರದೆ ಲಾರಿ ಚಾಲಕ ಅವರ ಮೇಲೆಯೇ ಮಣ್ಣನ್ನು ಸುರಿದಿರಬಹುದು. ಇದರಿಂದ ಆತ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದಾದ ಕೆಲವೇ ಗಂಟೆಗಳಲ್ಲಿ ನೀತಾ ದೇವಿ ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಸ್ಥಳಕ್ಕೆ ಬಂದು ಮೃತರನ್ನು ತನ್ನ ಪತಿ ಮಿಂಟು ಎಂದು ಗುರುತಿಸಿದ್ದಾರೆ. ಡಿಯೋರಿಯಾ ಜಿಲ್ಲೆಯ ನಿವಾಸಿಗಳಾಗಿದ್ದು, ಕೂಲಿ ಕೆಲಸಕ್ಕೆ ತಾವು ಬಂದಿರುವುದಾಗಿ ಹೇಳಿಕೊಂಡಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.