ಲಡಾಖ್ ಚೆಕ್‌ಪಾಯಿಂಟ್‌ನಲ್ಲಿ ‘ಜೆನ್-ಝೀ’ ವಾಗ್ವಾದ: ವೈರಲ್ ಆದ ಪ್ರವಾಸಿ ಮಹಿಳೆಯ ವಿಡಿಯೋ!

ಶ್ರೀನಗರ: ಲಡಾಖ್‌ನ ಕಾರ್ಗಿಲ್ ಪ್ರದೇಶದ ಮಿನಿಮಾರ್ಗ್ ಚೆಕ್‌ಪೋಸ್ಟ್‌ನಲ್ಲಿ ಮಹಿಳಾ ಪ್ರವಾಸಿಗಿಯೊಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, “ನಾವು ಜೆನ್-ಝೀ (Gen-Z) ಮತ್ತು ಈ ಅಸಂಬದ್ಧತೆಯನ್ನು ನಾವು ಸಹಿಸುವುದಿಲ್ಲ” ಎಂದು ಕೂಗುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಜುಲೈ 25 ರಂದು ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರ ಸಂಚಾರದ ಹಿನ್ನೆಲೆಯಲ್ಲಿ ಜೋಜಿಲಾ-ಗುಮ್ರಿ ಮಾರ್ಗದಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿತ್ತು. ರಕ್ಷಣಾ ಸಚಿವರು ಮತ್ತು ಸೇನಾ ಮುಖ್ಯಸ್ಥರು ವಿಮಾನದ ಮೂಲಕ ತೆರಳಬೇಕಿತ್ತು, ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಮೂಲಕ ಗುಮ್ರಿಗೆ ತೆರಳಿ, ಅಲ್ಲಿಂದ ರಸ್ತೆ ಮಾರ್ಗವಾಗಿ ಕಾರ್ಗಿಲ್ ಕಡೆಗೆ ಪ್ರಯಾಣಿಸಬೇಕಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅವರ ಸಂಚಾರವನ್ನು ಸುಗಮಗೊಳಿಸಲು ವಾಹನ ಸಂಚಾರವನ್ನು ತಡೆಯಲಾಗಿದ್ದು, ಇದರಿಂದ ಪ್ರವಾಸಿಗರು ಮತ್ತು ಇತರ ಪ್ರಯಾಣಿಕರಿಗೆ ವಿಳಂಬವಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಚೆಕ್‌ಪೋಸ್ಟ್‌ನಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಕೋಪದಿಂದ ವಾಗ್ವಾದ ನಡೆಸಿದ ಮಹಿಳೆ, ತಾವು ಪ್ರವಾಸಿಗರು ಹೊರತು ಕಾಶ್ಮೀರಿಗಳಲ್ಲ ಎಂದು ವಾದಿಸಿದ್ದಾರೆ. ಕಾಶ್ಮೀರಿಗಳಿಗೆ ಮಾತ್ರ ಇಂತಹ ನಿರ್ಬಂಧಗಳನ್ನು ವಿಧಿಸಲಾಗುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಈ ವೀಡಿಯೊ ಆ ಬಳಿಕ ವೈರಲ್ ಆಗಿದ್ದು, ಗಡಿ ಚೆಕ್‌ಪೋಸ್ಟ್‌ಗಳಲ್ಲಿ ಪ್ರವಾಸಿಗರ ವರ್ತನೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ವಿಐಪಿ ಸಂಚಾರ ಮುಗಿದ ಬಳಿಕ ಪ್ರವಾಸಿಗರನ್ನು ಆ ಪ್ರದೇಶದ ಮೂಲಕ ಮುಂದೆ ಹೋಗಲು ಅನುಮತಿಸಲಾಯಿತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
