Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಗದಗ: ಬೆಟಗೇರಿಯಲ್ಲಿ ಪತ್ತೆಯಾಯ್ತು 12ನೇ ಶತಮಾನದ ಅಪರೂಪದ ತ್ರಿಮುಖ ಸೂರ್ಯದೇವನ ಭೀಕರ ಶಿಲ್ಪ!

Spread the love

ಗದಗ: ಗದಗ ಜಿಲ್ಲೆಯ ಬೆಟಗೇರಿಯಲ್ಲಿ 12ನೇ ಶತಮಾನಕ್ಕೆ ಸೇರಿದ ಅಪರೂಪದ ತ್ರಿಮುಖ ಸೂರ್ಯದೇವನ ವಿಗ್ರಹವೊಂದು ಪತ್ತೆಯಾಗಿದ್ದು, ಇತಿಹಾಸ ಸಂಶೋಧಕರಲ್ಲಿ ಕುತೂಹಲ ಮೂಡಿಸಿದೆ.

ಇದೂವರೆಗೆ ಬೆಟಗೇರಿಯ ಗಾರ್ಗಿಪೇಟೆಯ ನಿವಾಸಿಗಳು ಈ ಮೂರ್ತಿಯನ್ನು ಬ್ರಹ್ಮದೇವರ ವಿಗ್ರಹವೆಂದು ಭಾವಿಸಿ ಪೂಜಿಸುತ್ತಿದ್ದರು. ಆದರೆ, ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಇದು ಮೂರು ಮುಖಗಳನ್ನು ಹೊಂದಿರುವ ಅಪರೂಪದ ಸೂರ್ಯದೇವನ ಮೂರ್ತಿ ಎಂಬುದು ಬೆಳಕಿಗೆ ಬಂದಿದೆ.

ಬ್ರಹ್ಮ ಹಾಗೂ ಸೂರ್ಯದೇವನ ವಿಗ್ರಹಗಳ ಕುರಿತು ಅಧ್ಯಯನ ನಡೆಸುತ್ತಿದ್ದ ಸಂಶೋಧಕರ ತಂಡ ಬೆಟಗೇರಿಗೆ ಭೇಟಿ ನೀಡಿದಾಗ ಈ ಮೂರ್ತಿಯನ್ನು ಪರಿಶೀಲಿಸಿತು.

ಪರಿಶೀಲನೆಯ ವೇಳೆ ಇದು ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸೂರ್ಯನ ರೂಪಗಳನ್ನು ಪ್ರತಿನಿಧಿಸುವ ಮೂರು ಮುಖಗಳನ್ನು ಹೊಂದಿರುವ ಅಪರೂಪದ ಸೂರ್ಯದೇವರನ ಶಿಲ್ಪ ಎಂಬುದು ದೃಢಪಟ್ಟಿದೆ.

ಕಪ್ಪು ಮಿಶ್ರಿತ ನೀಲಿ ಬಣ್ಣದ ಕಲ್ಲಿನಿಂದ ಈ ಶಿಲ್ಪವನ್ನು ಕೆತ್ತಲಾಗಿದ್ದು, ಸೂರ್ಯದೇವರನ್ನು ನಿಂತ ಭಂಗಿಯಲ್ಲಿ ಚಿತ್ರಿಸಲಾಗಿದೆ. ನಾಲ್ಕು ಕೈಗಳನ್ನು ಹೊಂದಿರುವ ದೇವರು ತಾವರೆ ಮೊಗ್ಗನ್ನು ಹಿಡಿದಿರುವಂತೆ ಕಾಣಿಸುತ್ತದೆ. ತಲೆಯ ಮೇಲೆ ಎತ್ತರದ ಕಿರೀಟವಿದ್ದು, ಕುತ್ತಿಗೆಯಲ್ಲಿ ಹಾರಗಳು, ಭುಜಗಳ ಮೇಲೆ ಆಭರಣಗಳು ಹಾಗೂ ಸೊಂಟದ ಭಾಗದಲ್ಲಿ ಕಚ್ಚೆಯ ಗುರುತುಗಳು ಸ್ಪಷ್ಟವಾಗಿ ಕಂಡು ಬಂದಿದೆ.

ಸಂಶೋಧಕರ ಪ್ರಕಾರ, ಈ ತ್ರಿಮುಖ ಸೂರ್ಯದೇವನ ರೂಪವು ಭಾರತೀಯ ಶಿಲ್ಪಕಲೆಯಲ್ಲಿ ಮಾರ್ತಾಂಡ ಭೈರವ ಅಥವಾ ಸೂರ್ಯನಾರಾಯಣ ತತ್ವವನ್ನು ಪ್ರತಿಬಿಂಬಿಸುತ್ತದೆ. ಇದು ಸೂರ್ಯ, ಬ್ರಹ್ಮ, ವಿಷ್ಣು ಮತ್ತು ಶಿವನ ಸಂಯೋಜನೆಯ ಪ್ರತೀಕವೆಂದು ಪರಿಗಣಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಬೆಟಗೇರಿಯ ಸಂಶೋಧಕ ಭೀಮ ಬೆಣಹಾಳ ಮಾತನಾಡಿ, “ನಮ್ಮ ಮನೆಯ ಸಮೀಪದಲ್ಲೇ ಇಂತಹ ಅಪರೂಪದ ಸೂರ್ಯದೇವನ ವಿಗ್ರಹ ಇರುವುದು ಆಶ್ಚರ್ಯಕರವಾಗಿದೆ. ನಮ್ಮ ಇತಿಹಾಸವನ್ನು ಇನ್ನಷ್ಟು ಆಳವಾಗಿ ಅಧ್ಯಯನ ಮಾಡಿ, ಅದರ ಮಾಹಿತಿಯನ್ನು ಮುಂದಿನ ಪೀಳಿಗೆಗಳಿಗೆ ತಲುಪಿಸುವ ಅಗತ್ಯವಿದೆ” ಎಂದು ಹೇಳಿದ್ದಾರೆ.

ಇತಿಹಾಸ ಸಂಶೋಧಕಿ ಡಾ. ಶ್ವೇತಾ ಭಸ್ಮೆ ಮಾತನಾಡಿ, “ಪುರಾಣಗಳಲ್ಲಿ ಬೆಳಗಿನ ಸೂರ್ಯನನ್ನು ಬ್ರಹ್ಮ, ಮಧ್ಯಾಹ್ನದ ಸೂರ್ಯನನ್ನು ಮಹೇಶ್ವರ (ಶಿವ) ಹಾಗೂ ಸಂಜೆಯ ಸೂರ್ಯನನ್ನು ವಿಷ್ಣು ಎಂದು ವರ್ಣಿಸಲಾಗಿದೆ. ಈ ಮೂರು ಮುಖಗಳು ಆ ಮೂರು ಶಕ್ತಿಗಳ ಏಕತೆಯನ್ನು ಸೂಚಿಸುತ್ತವೆ. ಜೊತೆಗೆ ಭೂತ, ವರ್ತಮಾನ ಮತ್ತು ಭವಿಷ್ಯದ ಸಂಕೇತವಾಗಿಯೂ ಇದನ್ನು ಕಾಣಬಹುದು” ಎಂದು ವಿವರಿಸಿದ್ದಾರೆ.

ಮುಂದುವರೆದು, “ಸಾಂಪ್ರದಾಯಿಕವಾಗಿ ಈ ಶಿಲ್ಪದಲ್ಲಿ ಸೂರ್ಯದೇವರ ಪತ್ನಿಯರಾದ ಉಷಾ ಮತ್ತು ಪ್ರತ್ಯುಷೆಯ ಪ್ರತಿರೂಪಗಳನ್ನೂ ಕಾಣಬಹುದು. ಮೂರ್ತಿಯ ಹಿಂಭಾಗದಲ್ಲಿ ಅರ್ಧವೃತ್ತಾಕಾರದ ಪ್ರಕಾಶವಲಯವನ್ನು ಕೆತ್ತಲಾಗಿದ್ದು, ಕೆಳಭಾಗದಲ್ಲಿ ಹೊರಚಾಚಿದ ಕೀಲು ಮಾದರಿಯ ವಿನ್ಯಾಸವೂ ಇದೆ” ಎಂದು ತಿಳಿಸಿದ್ದಾರೆ.

ಈ ಅಪರೂಪದ ತ್ರಿಮುಖ ಸೂರ್ಯದೇವನ ವಿಗ್ರಹವು ಉತ್ತರ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮತ್ತೊಂದು ಮಹತ್ವದ ಸೇರ್ಪಡೆಯಾಗಿದ್ದು, ಇದರ ಕುರಿತು ಇನ್ನಷ್ಟು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *