ದೇಶದಲ್ಲೇ ಮೊದಲ ಬಾರಿಗೆ AI ತಂತ್ರಜ್ಞಾನದ ಮೂಲಕ ಕನ್ನಡಕ್ಕೆಅನುವಾದಗೊಂಡ ಇತಿಹಾಸ ಕೃತಿ ಬಿಡುಗಡೆ!

ಬೆಂಗಳೂರು: ಸಂಸ್ಕೃತಿ ಮತ್ತು ತಂತ್ರಜ್ಞಾನದ ಅಪೂರ್ವ ಸಮ್ಮಿಲನಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಸಾಕ್ಷಿಯಾಗುತ್ತಿದ್ದು, ದೇಶದಲ್ಲೇ ಮೊದಲ ಬಾರಿಗೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಸಹಾಯದೊಂದಿಗೆ ಸಂಪೂರ್ಣವಾಗಿ ಕನ್ನಡಕ್ಕೆ ಅನುವಾದಗೊಂಡಿರುವ ಇತಿಹಾಸ ಆಧಾರಿತ ಕಾದಂಬರಿ (Non-fiction Book) ಬಿಡುಗಡೆಗೆ ಸಜ್ಜಾಗಿದೆ.

ಮುಖ್ಯಾಂಶಗಳು
- ದೇಶದಲ್ಲೇ ಮೊದಲ ಬಾರಿಗೆ ಎಐ ತಂತ್ರಜ್ಞಾನ ಬಳಸಿ ಕನ್ನಡ ಪುಸ್ತಕ ಅನುವಾದಿಸಲಾಗಿದೆ.
- ಮೈಸೂರಿನಲ್ಲಿ ಇತಿಹಾಸಕಾರ ವಿಕ್ರಮ್ ಸಂಪತ್ ಬರೆದ ಗೌಹರ್ ಜಾನ್ ಕೃತಿ ಬಿಡುಗಡೆಯಾಗಲಿದೆ.
- ಸಂಸದ ಯದುವೀರ್ ಒಡೆಯರ್ ಈ ಐತಿಹಾಸಿಕ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಖ್ಯಾತ ಇತಿಹಾಸಕಾರ ವಿಕ್ರಮ್ ಸಂಪತ್ ಆಂಗ್ಲ ಭಾಷೆಯಲ್ಲಿ ಬರೆದಿರುವ ಪ್ರಸಿದ್ಧ ಕೃತಿ ‘ಮೈ ನೇಮ್ ಈಸ್ ಗೌಹರ್ ಜಾನ್: ದಿ ಲೈಫ್ ಅಂಡ್ ಟೈಮ್ಸ್ ಆಫ್ ಎ ಮ್ಯೂಸಿಷಿಯನ್’ (My Name Is Gauhar Jaan: The Life and Times of a Musician) ಪುಸ್ತಕವು ಈಗ ಎಐ ತಂತ್ರಜ್ಞಾನದ ಮೂಲಕ ಕನ್ನಡಕ್ಕೆ ತರ್ಜುಮೆಗೊಂಡಿದೆ. ಈ ಐತಿಹಾಸಿಕ ಪುಸ್ತಕವನ್ನು ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಕಾಶನ ಲೋಕದಲ್ಲಿ ಹೊಸ ಮೈಲಿಗಲ್ಲು
ಬೆಂಗಳೂರು ಮೂಲದ ಸ್ಟಾರ್ಟ್-ಅಪ್ ಸಂಸ್ಥೆಯೊಂದರ ‘ಟ್ರಾನ್ಸ್ಲಿಟ್’ (TransLit) ಎಂಬ ಅತ್ಯಾಧುನಿಕ ಎಐ ತಂತ್ರಜ್ಞಾನವನ್ನು ಬಳಸಿ ಈ ಪುಸ್ತಕವನ್ನು ಅನುವಾದಿಸಲಾಗಿದೆ. ತಂತ್ರಜ್ಞಾನವು ಶೇಕಡಾ 80 ರಷ್ಟು ನಿಖರತೆಯೊಂದಿಗೆ ಕೆಲವೇ ವಾರಗಳಲ್ಲಿ ಅನುವಾದ ಕಾರ್ಯ ಮುಗಿಸಿದ್ದು, ನಂತರ ಮನುಷ್ಯರಿಂದ ಕೇವಲ ಪ್ರೂಫ್ ರೀಡಿಂಗ್ ಹಾಗೂ ಎಡಿಟಿಂಗ್ ಮಾಡಿಸಲಾಗಿದೆ. ಸಾಮಾನ್ಯವಾಗಿ ಇಂತಹ ದೊಡ್ಡ ಕೃತಿಯನ್ನು ಭಾಷಾಂತರಿಸಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ, ಆದರೆ ಎಐ ತಂತ್ರಜ್ಞಾನದಿಂದ ಕೇವಲ 3 ರಿಂದ 4 ವಾರಗಳಲ್ಲಿ ಈ ಕೆಲಸ ಪೂರ್ಣಗೊಂಡಿದೆ. ಮೂಲ ಕೃತಿಯ ಸಾಹಿತ್ಯಿಕ ಗುಣಮಟ್ಟ ಹಾಗೂ ಶೈಲಿಯನ್ನು ಇದು ಯಥಾವತ್ತಾಗಿ ಕಾಯ್ದುಕೊಂಡಿದೆ ಎಂದು ಲೇಖಕ ವಿಕ್ರಮ್ ಸಂಪತ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಯಾರು ಈ ಗೌಹರ್ ಜಾನ್?
ಗೌಹರ್ ಜಾನ್ (1873-1930) ಕೋಲ್ಕತ್ತಾದ ಭಾರತೀಯ ಉಪಖಂಡದ ಪ್ರಸಿದ್ಧ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರ್ತಿ. 1902 ರಲ್ಲಿ ಗ್ರಾಮೊಫೋನ್ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ ಧ್ವನಿ ಮುದ್ರಣ ಮಾಡಿದ ಮೊದಲ ಮಹಿಳಾ ಕಲಾವಿದೆ ಎಂಬ ಕೀರ್ತಿ ಇವರದ್ದಾಗಿದೆ. ತಮ್ಮ ಜೀವಿತಾವಧಿಯ ಕೊನೆಯ ದಿನಗಳಲ್ಲಿ ತೀವ್ರ ಕಷ್ಟಗಳನ್ನು ಎದುರಿಸುತ್ತಿದ್ದಾಗ, ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಗೌಹರ್ ಜಾನ್ ಅವರನ್ನು ಮೈಸೂರಿಗೆ ರಾಜ್ಯ ಅತಿಥಿಯಾಗಿ ಆಹ್ವಾನಿಸಿ, ಚಾಮುಂಡಿ ವಿಹಾರದ ‘ದಿಲ್ ಖುಷ್’ ಎಂಬ ಕಾಟೇಜ್ನಲ್ಲಿ ವಸತಿ ಕಲ್ಪಿಸಿದ್ದರು. ಜೂನ್ 17, 1930 ರಂದು ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಅವರು ನಿಧನರಾದರು. ಆಕೆಯ ಇಡೀ ಜೀವನದ ಏಳುಬೀಳುಗಳ ರೋಚಕ ಕಥೆಯನ್ನು ಈ ಪುಸ್ತಕ ಒಳಗೊಂಡಿದೆ. ಮೈಸೂರಿನಲ್ಲೇ ಕೊನೆಯುಸಿರೆಳೆದ ಮಹಾನ್ ಕಲಾವಿದೆಯ ಜೀವನ ಚರಿತ್ರೆ ಇದೀಗ ಆಧುನಿಕ ತಂತ್ರಜ್ಞಾನದ ಮೂಲಕ ಕನ್ನಡದಲ್ಲೇ ಓದುಗರಿಗೆ ಸಿಗುತ್ತಿರುವುದು ವಿಶೇಷವಾಗಿದೆ.