ಫಿಫಾ ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ಅರ್ಜೆಂಟೀನಾ ರೋಚಕ ಜಯ; ಫೈನಲ್ನಲ್ಲಿ ಸ್ಪೇನ್ಗೆ ಸವಾಲು!

ಅಟ್ಲಾಂಟಾ: ಲಿಯೋನೆಲ್ ಮೆಸ್ಸಿ ಅವರ ನಾಯಕತ್ವದ ಆಟ ಹಾಗೂ ಅಂತಿಮ ಕ್ಷಣಗಳಲ್ಲಿ ದಾಖಲಾದ ಎರಡು ಗೋಲುಗಳ ನೆರವಿನಿಂದ ಅರ್ಜೆಂಟೀನಾ ವಿಶ್ವಕಪ್ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ 2-1 ಗೋಲುಗಳಿಂದ ರೋಚಕ ಗೆಲುವು ಸಾಧಿಸಿ ಫೈನಲ್ ಗೆ ಪ್ರವೇಶಿಸಿತು. ಪ್ರಶಸ್ತಿ ಸುತ್ತಿನಲ್ಲಿ ಅದು ಸ್ಪೇನ್ ತಂಡವನ್ನು ಎದುರಿಸಲಿದೆ.
21 ವರ್ಷಗಳ ಬಳಿಕ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. 1998ರ ಬಳಿಕ ವಿಶ್ವಕಪ್ ನಾಕೌಟ್ ಹಂತದಲ್ಲಿ ನಡೆದ ಮೊದಲ ಪಂದ್ಯ ಇದಾಗಿತ್ತು. 1982ರ ಫಾಕ್ಲ್ಯಾಂಡ್ಸ್ (ಮಾಲ್ವಿನಾಸ್) ಯುದ್ಧದ ಹಿನ್ನೆಲೆಯಲ್ಲಿ ಹಾಗೂ ಎರಡೂ ರಾಷ್ಟ್ರಗಳ ನಡುವಿನ ಐತಿಹಾಸಿಕ ಪೈಪೋಟಿಯಿಂದ ಪಂದ್ಯಕ್ಕೆ ವಿಶೇಷ ಮಹತ್ವ ಲಭಿಸಿತ್ತು.

ಪಂದ್ಯದ ಮುನ್ನ ಎರಡೂ ತಂಡಗಳ ಕೋಚ್ ಗಳು ಉದ್ವಿಗ್ನತೆಯನ್ನು ತಗ್ಗಿಸುವ ಪ್ರಯತ್ನ ನಡೆಸಿದ್ದರು. “ಇದು ಕೇವಲ ಫುಟ್ಬಾಲ್ ಪಂದ್ಯ” ಎಂದು ಅರ್ಜೆಂಟೀನಾ ಕೋಚ್ ಲಿಯೋನೆಲ್ ಸ್ಕಾಲೋನಿ ಹೇಳಿದ್ದರೆ, “ಭಾವನಾತ್ಮಕವಾಗಿ ಹೆಚ್ಚು ತೊಡಗಿಸಿಕೊಂಡರೆ ಅದು ಸಹಾಯ ಮಾಡುವುದಿಲ್ಲ” ಎಂದು ಇಂಗ್ಲೆಂಡ್ ಕೋಚ್ ಥಾಮಸ್ ಟುಚೆಲ್ ಪ್ರತಿಕ್ರಿಯಿಸಿದ್ದರು.
ಅಟ್ಲಾಂಟಾ ಕ್ರೀಡಾಂಗಣದಲ್ಲಿ ಪಂದ್ಯಕ್ಕೂ ಮುನ್ನ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು. ಎರಡೂ ತಂಡಗಳ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು, ಅರ್ಜೆಂಟೀನಾ ಬೆಂಬಲಿಗರು ನಿರಂತರ ಘೋಷಣೆಗಳನ್ನು ಕೂಗಿ ವಾತಾವರಣವನ್ನು ಕಾವೇರಿಸಿದರು.
ಪಂದ್ಯ ಆರಂಭದಿಂದಲೇ ಎರಡೂ ತಂಡಗಳ ನಡುವೆ ತೀವ್ರ ದೈಹಿಕ ಪೈಪೋಟಿ ನಡೆಯಿತು. ಕಠಿಣ ಟ್ಯಾಕಲ್ ಗಳು ಮತ್ತು ಫೌಲ್ ಗಳಿಂದ ಮೊದಲಾರ್ಧ ಗೋಲುರಹಿತವಾಗಿ ಅಂತ್ಯಗೊಂಡಿತು. ಜಾನ್ ಸ್ಟೋನ್ಸ್ ಅವರ ಹೆಡರ್ ಇಂಗ್ಲೆಂಡ್ ನ ಮೊದಲ ಅವಕಾಶವಾಗಿದ್ದರೆ, ಮೆಸ್ಸಿ ಮೇಲಿನ ಫೌಲ್ ಗೆ ಎಲಿಯಟ್ ಆಂಡರ್ಸನ್ ಮೊದಲ ಯೆಲ್ಲೋ ಕಾರ್ಡ್ ಪಡೆದರು. ಮೆಸ್ಸಿಯ ಪಾಸ್ ನಿಂದ ಸಿಕ್ಕ ಅವಕಾಶದಲ್ಲಿ ಎಂಜೊ ಫೆರ್ನಾಂಡಿಸ್ ಅವರ ಬಲಿಷ್ಠ ಹೊಡೆತ ಕ್ರಾಸ್ಬಾರ್ ಮೇಲಿಂದ ಹೊರಹೋಗಿ ಅರ್ಜೆಂಟೀನಾ ಮುನ್ನಡೆ ಸಾಧಿಸುವ ಅವಕಾಶ ತಪ್ಪಿಸಿಕೊಂಡಿತು.
ದ್ವಿತೀಯಾರ್ಧ ಆರಂಭದಲ್ಲೇ ಜೂಲಿಯನ್ ಅಲ್ವಾರೆಝ್ ಸತತ ಎರಡು ಪ್ರಯತ್ನಗಳಿಂದ ಇಂಗ್ಲೆಂಡ್ ಗೋಲ್ಕೀಪರ್ ಜೋರ್ಡನ್ ಪಿಕ್ಫೋರ್ಡ್ ಅವರನ್ನು ಪರೀಕ್ಷಿಸಿದರು. ಆದರೆ 55ನೇ ನಿಮಿಷದಲ್ಲಿ ಪಂದ್ಯಕ್ಕೆ ತಿರುವು ಸಿಕ್ಕಿತು. ಮಾರ್ಗನ್ ರೋಜರ್ಸ್ ನೀಡಿದ ನಿಖರ ಕ್ರಾಸ್ ಅನ್ನು ಆಂಥೋನಿ ಗಾರ್ಡನ್ ಗೋಲಾಗಿ ಪರಿವರ್ತಿಸಿ ಇಂಗ್ಲೆಂಡ್ ಗೆ 1-0 ಮುನ್ನಡೆ ತಂದುಕೊಟ್ಟರು.
ಮುನ್ನಡೆ ಪಡೆದ ಬಳಿಕ ಇಂಗ್ಲೆಂಡ್ ರಕ್ಷಣಾತ್ಮಕ ಆಟಕ್ಕೆ ಮೊರೆಹೋಯಿತು. ಅರ್ಜೆಂಟೀನಾ ನಿರಂತರ ದಾಳಿಗಳನ್ನು ನಡೆಸಿತು. ಪಿಕ್ಫೋರ್ಡ್ ಹಲವು ಅಮೋಘ ಸೇವ್ ಗಳ ಮೂಲಕ ತಂಡವನ್ನು ಗೋಲುಗಳಿಂದ ರಕ್ಷಿಸಿದರು. ಡಿಜೆಡ್ ಸ್ಪೆನ್ಸ್ ಗಿಯುಲಿಯಾನೊ ಸಿಮಿಯೋನ್ ವಿರುದ್ಧ ಮಾಡಿದ ಪ್ರಮುಖ ಟ್ಯಾಕಲ್ ಕೂಡ ಇಂಗ್ಲೆಂಡ್ಗೆ ನೆರವಾಯಿತು.
ಆದರೆ ಪಂದ್ಯ ಅಂತ್ಯದ ಕ್ಷಣಗಳಲ್ಲಿ ಅರ್ಜೆಂಟೀನಾ ಅದ್ಭುತ ಪುನರಾಗಮನ ನಡೆಸಿತು. 87ನೇ ನಿಮಿಷದಲ್ಲಿ ಎಂಜೊ ಫೆರ್ನಾಂಡಿಸ್ ಬಲಿಷ್ಠ ಹೊಡೆತದ ಮೂಲಕ ಸಮಬಲದ ಗೋಲು ದಾಖಲಿಸಿದರು. ನಂತರ ಹೆಚ್ಚುವರಿ ಸಮಯದಲ್ಲಿ ಮೆಸ್ಸಿ ನೀಡಿದ ನಿಖರ ಪಾಸ್ ಅನ್ನು ಲೌಟಾರೊ ಮಾರ್ಟಿನೆಜ್ ಗೋಲಾಗಿ ಪರಿವರ್ತಿಸಿ ಅರ್ಜೆಂಟೀನಾಕ್ಕೆ 2-1ರ ಮುನ್ನಡೆ ಹಾಗೂ ಫೈನಲ್ ಪ್ರವೇಶ ಖಚಿತಪಡಿಸಿದರು.
ಈ ಗೆಲುವಿನೊಂದಿಗೆ ಅರ್ಜೆಂಟೀನಾ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿದ್ದು, ಪ್ರಶಸ್ತಿಗಾಗಿ ಸ್ಪೇನ್ ತಂಡವನ್ನು ಎದುರಿಸಲಿದೆ.