ಪಾಲಿಕೆ ನಿರ್ಲಕ್ಷ್ಯ: ದುರ್ಗಾನಗರದಲ್ಲಿ ಡೆಂಗ್ಯೂ ಭೀತಿ

ಮಂಗಳೂರು: ಮಂಗಳೂರು ಉತ್ತರ ಕ್ಷೇತ್ರದ ದುರ್ಗಾನಗರದಲ್ಲಿ ಮಹಾನಗರ ಪಾಲಿಕೆ (ಸುರತ್ಕಲ್ ವಲಯ)ದ ದಿವ್ಯ ನಿರ್ಲಕ್ಷ್ಯದಿಂದಾಗಿ ಕೃತಕ ನೆರೆ ಹಾಗೂ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ. ಮಳೆಗಾಲ ಆರಂಭಕ್ಕೆ ದಿನಗಣನೆ ಆರಂಭವಾಗಿದ್ದರೂ ವಾರ್ಡ್ನ ಪ್ರಮುಖ ಚರಂಡಿಗಳಲ್ಲಿ ತುಂಬಿರುವ ಕಸ-ಕಡ್ಡಿಯನ್ನು ತೆರವುಗೊಳಿಸದೆ ಇರುವುದು ಹಾಗೂ ರಸ್ತೆ ಬದಿಯ ಮುಳ್ಳುಗಾಡನ್ನು ಕತ್ತರಿಸದೆ ಇರುವುದು ಸ್ಥಳೀಯ ನಿವಾಸಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಚರಂಡಿಗಳು ಬ್ಲಾಕ್ ಆಗಿ ನೀರು ನಿಲ್ಲುತ್ತಿರುವುದರಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಡೆಂಗ್ಯೂ ಮತ್ತು ಮಲೇರಿಯಾದಂತಹ ಮಾರಕ ರೋಗಗಳು ಹರಡುವ ಆತಂಕ ಸೃಷ್ಟಿಯಾಗಿದೆ. ಈ ಕುರಿತು ಸ್ಥಳೀಯರು ಪಾಲಿಕೆಗೆ ಹಲವಾರು ಬಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಈ ಗಂಭೀರ ಸಮಸ್ಯೆಯ ಕುರಿತು ವಾರ್ಡಿನ ಮಹಾನಗರ ಪಾಲಿಕೆ ಸದಸ್ಯರನ್ನು ಸಂಪರ್ಕಿಸಿದರೆ, “ತಮ್ಮ ಅವಧಿ ಮುಗಿದಿದೆ” ಎಂಬ ಬಾಲಿಶ ಹಾಗೂ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಪಾಲಿಕೆಯ ಈ ನಿಷ್ಕ್ರಿಯತೆ ಹಾಗೂ ಜನಪ್ರತಿನಿಧಿಯ ಉಡಾಫೆ ವರ್ತನೆಯ ವಿರುದ್ಧ ದುರ್ಗಾನಗರ ರೆಸಿಡೆಂಟ್ಸ್ ಅಸೋಸಿಯೇಷನ್ ಹಾಗೂ ಸ್ಯಾಫ್ರನ್ ಫ್ರಂಟ್ ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣವೇ ಚರಂಡಿ ಸ್ವಚ್ಛಗೊಳಿಸುವ ಮತ್ತು ಗ್ರಾಸ್ ಕಟಿಂಗ್ ಕಾಮಗಾರಿ ಆರಂಭಿಸಬೇಕು ಎಂದು ಸ್ಯಾಫ್ರನ್ ಫ್ರಂಟ್ ಮುಖ್ಯಸ್ಥರಾದ ರಾಜೇಶ್ ಪವಿತ್ರನ್ ಪಾಲಿಕೆಗೆ ಕಡಕ್ ಎಚ್ಚರಿಕೆ ನೀಡಿದ್ದಾರೆ. ಮಳೆಗಾಲದ ಮುನ್ನ ಮಾಡಬೇಕಾದ ಕನಿಷ್ಠ ಕರ್ತವ್ಯಗಳನ್ನೂ ಮರೆತು ಅಧಿಕಾರಿಗಳು ಜನಸಾಮಾನ್ಯರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿರುವ ಅವರು, ಸುರತ್ಕಲ್ ವಲಯ ಪಾಲಿಕೆ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಿವಾಸಿಗಳ ಅಸೋಸಿಯೇಷನ್ ಒಗ್ಗೂಡಿಸಿ ಪಾಲಿಕೆಯ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.