ಚಿಕ್ಕಬಳ್ಳಾಪುರ: ಓಮ್ನಿ-ಕ್ಯಾಂಟರ್ ಮುಖಾಮುಖಿ ಢಿಕ್ಕಿ; ಮೂವರು ಮಹಿಳಾ ಕಾರ್ಮಿಕರು ದುರ್ಮರಣ, 12 ಜನರಿಗೆ ಗಾಯ

ಚಿಕ್ಕಬಳ್ಳಾಪುರ : ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹೊಸಹಳ್ಳಿ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿ-234ರಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಹಿಳಾ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಸುಮಾರು 12 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಲ್ಲಿಕಾರ್ಜುನಪುರ ಗ್ರಾಮದಿಂದ ಶಿಡ್ಲಘಟ್ಟ ತಾಲೂಕಿನ ತಿಪ್ಪೇನಹಳ್ಳಿಗೆ ಕೂಲಿ ಕೆಲಸಕ್ಕೆ ಮಹಿಳೆಯರು ಮಾರುತಿ ಓಮ್ಮಿ ವಾಹನದಲ್ಲಿ ತೆರಳುತ್ತಿದ್ದರು. ಸೋಮವಾರ ಮುಂಜಾನೆ ಸುಮಾರು 2.30 ಗಂಟೆ ವೇಳೆಗೆ ಹೊಸಹಳ್ಳಿ ಗೇಟ್ ಬಳಿ ಎದುರಿನಿಂದ ಬಂದ ಮಿನಿ ಕ್ಯಾಂಟರ್ ಮತ್ತು ಓಮ್ಮಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ Chikkaballapur | ಅಂಗನವಾಡಿ ಮೇಲಾವಣಿ ಕುಸಿದು ನಾಲ್ವರು ಮಕ್ಕಳಿಗೆ ಗಾಯ
ಢಿಕ್ಕಿಯ ರಭಸಕ್ಕೆ ಓಮ್ಮಿ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಮಲ್ಲಿಕಾರ್ಜುನಪುರ ಗ್ರಾಮದ ರೂಪ (25), ರತ್ನಮ್ಮ (45) ಮತ್ತು ಮುನಿಚಿನ್ನಮ್ಮ (48) ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಓಮ್ಮಿಯಲ್ಲಿದ್ದ ಸುಮಾರು 12 ಮಂದಿಗೆ ಸಣ್ಣಪುಟ್ಟ ಹಾಗೂ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಆಂಬುಲೆನ್ಸ್ ಮೂಲಕ ಸಮೀಪದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಶಿಡ್ಲಘಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
