ಛತ್ತೀಸ್‌ಗಢ: ಬೋಧಘಾಟ್ ಯೋಜನೆಗೆ ಆದಿವಾಸಿಗಳ ತೀವ್ರ ವಿರೋಧ; ‘ನಾವು ಬದುಕು ಬಿಟ್ಟುಕೊಡಲ್ಲ’ ಎಂದು ರೊಚ್ಚಿಗೆದ್ದ ಜನ!

ರಾಯಪುರ: ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಬೋಧಘಾಟ್ ವಿವಿಧೋದ್ದೇಶ ಯೋಜನೆಗೆ ಮರುಚಾಲನೆ ನೀಡಿರುವ ಛತ್ತೀಸ್ಕಢ ಸರ್ಕಾರದ ಕ್ರಮವನ್ನು ಆದಿವಾಸಿಗಳು ತೀವ್ರವಾಗಿ ವಿರೋಧಿಸಿದ್ದು “ಮೊದಲು ನಮ್ಮನ್ನು ಗುಂಡಿಕ್ಕಿ ಸಾಯಿಸಿ; ಬಳಿಕ ಅಣೆಕಟ್ಟು ನಿರ್ಮಾಣ ಮಾಡಿ” ಎಂದು ಒಕ್ಕೊರಲ ಎಚ್ಚರಿಕೆ ನೀಡಿದ್ದಾರೆ.
ಬಸ್ತರ್‌ನಲ್ಲಿ ಈ ಉದ್ದೇಶಿತ ಯೋಜನೆಗೆ ತಮ್ಮ ಭೂಮಿ, ಅರಣ್ಯ ಮತ್ತು ಪವಿತ್ರ ತಾಣಗಳನ್ನು ಬಿಟ್ಟುಕೊಡುವುದಿಲ್ಲ ಎಂದು 56 ಗ್ರಾಮಗಳ ಜನತೆ ಪಟ್ಟು ಹಿಡಿದಿದ್ದಾರೆ. ಈ ಯೋಜನೆಯಿಂದ ಸಾವಿರಾರು ಮಂದಿಯನ್ನು ಸ್ಥಳಾಂತರಿಸುವ ಸಾಧ್ಯತೆ ಇದೆ ಎಂಬ ಭೀತಿಯಿಂದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು.
ಐದು ದಶಕಗಳ ಹಿಂದೆ ಮೊದಲು ಯೋಜನೆ ನಿರ್ಮಿಸಲು ಪ್ರಸ್ತಾವಿಸಿದ್ದ ಬರ್ಸೂರು ಬಳಿಯ ಹಿತಲ್ಕುಡುಂ ಗ್ರಾಮದಲ್ಲಿ ಭಾರಿ ಸಂಖ್ಯೆಯಲ್ಲಿ ಸೇರಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ತಮ್ಮ ಒಪ್ಪಿಗೆ ಇಲ್ಲದೇ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆಯನ್ನು ವಿರೋಧಿಸುವುದಾಗಿ 18 ಗ್ರಾಮ ಪಂಚಾಯಿತಿಗಳು ಸ್ಪಷ್ಟಪಡಿಸಿವೆ. ಸಾಂಪ್ರದಾಯಿಕ ದೇವರ ಮೂರ್ತಿಗಳು ಹಾಗೂ ಧಾರ್ಮಿಕ ಸಂಕೇತಗಳೊಂದಿಗೆ ಆದಿವಾಸಿಗಳು ಪ್ರತಿಭಟನೆಗೆ ಆಗಮಿಸಿದ್ದರು.
ಯೋಜನೆಯಿಂದ ದಂತೇವಾಡ, ಬಿಜಾಪುರ, ಬರ್ಸ್ತ ಮತ್ತು ನಾರಾಯಣಪುರ ಜಿಲ್ಲೆಯ ಹಲವು ಗ್ರಾಮಗಳಿಗೆ ಧಕ್ಕೆಯಾಗಲಿದ್ದು, 16 ಸಾವಿರ ಹೆಕ್ಟೇರ್ ಅರಣ್ಯಭೂಮಿ ಮುಳುಗಡೆಯಾಗುತ್ತದೆ ಹಾಗೂ ಸಾವಿರಾರು ಮಂದಿಯ ಬದುಕು ಬುಡಮೇಲಾಗುತ್ತದೆ ಎಂದು ಪ್ರತಿಭಟನಾಕಾರರು ಆಪಾದಿಸಿದ್ದಾರೆ. ಒಂದು ಕಡೆಯಿಂದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರುವ ಸರ್ಕಾರ ಇನ್ನೊಂದೆಡೆ ವಿನಾಶವನ್ನು ಆಹ್ವಾನಿಸುತ್ತಿದೆ ಎಂದು ಬಿಜಾಪುರ ಶಾಸಕ ವಿಕ್ರಮ್ ಮಾಂಡವಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.
