ಏರ್ ಪ್ಯೂರಿಫೈಯರ್ ಮೇಲಿನ ಜಿಎಸ್‌ಟಿ ಕಡಿತಕ್ಕೆ ಕೇಂದ್ರ ಸರಕಾರ ವಿರೋಧ

ಹೊಸದಿಲ್ಲಿ: ಏರ್ ಪ್ಯೂರಿಫೈಯರ್‌ಗಳ (ಗಾಳಿ ಶುದ್ಧೀಕರಣ ಯಂತ್ರ) ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡಿ ಅವುಗಳನ್ನು “ವೈದ್ಯಕೀಯ ಸಾಧನಗಳು” ಎಂದು ವರ್ಗೀಕರಿಸಬೇಕೆಂದು ಕೋರಿ ದಿಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಕಾಲಿಕ ಹಿತಾಸಕ್ತಿ ಅರ್ಜಿಗೆ ಕೇಂದ್ರ ಸರ್ಕಾರ ಶುಕ್ರವಾರ ವಿರೋಧ ವ್ಯಕ್ತಪಡಿಸಿದೆ.


“ಇದು ವೈದ್ಯಕೀಯ ಸಾಧನವಲ್ಲ, ಜಿಎಸ್‌ಟಿ ಮಂಡಳಿಯು ಈ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ವೈದ್ಯಕೀಯ ಸಾಧನಗಳ ವರ್ಗೀಕರಣವನ್ನು ಆರೋಗ್ಯ ಸಚಿವಾಲಯವು ವಿವರವಾದ ಪರಿಶೀಲನೆಗಳ ನಂತರ ಮಾಡುತ್ತದೆ, ಜಿಎಸ್‌ಟಿ ಮಂಡಳಿಯಲ್ಲ” ಎಂದು ಕೇಂದ್ರ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

ನ್ಯಾಯಮೂರ್ತಿ ವಿಕಾಸ್ ಮಹಾಜನ್ ಮತ್ತು ನ್ಯಾಯಮೂರ್ತಿ ವಿನೋದ್ ಕುಮಾರ್ ಅವರ ಪೀಠವು ಈ ಅರ್ಜಿಯ ವಿಚಾರಣೆಯನ್ನು ನಡೆಸಿತು. ಕೇಂದ್ರದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅವರು, ಏರ್ ಪ್ಯೂರಿಫೈಯರ್‌ಗಳ ಮೇಲಿನ ತೆರಿಗೆ ದರ ಕಡಿತಗೊಳಿಸುವ ಬಗ್ಗೆ ಚರ್ಚಿಸಲು ಯಾವುದೇ ತುರ್ತು ಜಿಎಸ್‌ಟಿ ಕೌನ್ಸಿಲ್ ಸಭೆ ಕರೆಯಲಾಗಿಲ್ಲ ಎಂದು ತಿಳಿಸಿದರು. ಅಲ್ಲದೆ, ಈ ವಿಷಯದ ಬಗ್ಗೆ ವಿವರವಾದ ಅಫಿಡವಿಟ್ ಸಲ್ಲಿಸಲು ಹೆಚ್ಚಿನ ಸಮಯಾವಕಾಶ ಬೇಕೆಂದು ಕೋರಿದರು.

ವಾಯು ಮಾಲಿನ್ಯದ ಸಮಸ್ಯೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಏರ್ ಪ್ಯೂರಿಫೈಯರ್‌ಗಳನ್ನು “ಜೀವರಕ್ಷಕ ಉಪಕರಣಗಳ” ವರ್ಗಕ್ಕೆ ಸೇರಿಸಿ, ಸಾಮಾನ್ಯ ಜನರಿಗೂ ಕೈಗೆಟುಕುವಂತೆ ಜಿಎಸ್‌ಟಿ ದರವನ್ನು ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.